ಅಂಬೇಡ್ಕರ್ ವಿರೋಧಿ ಧೋರಣೆ- ಬಿಜೆಪಿ ಎಸ್ಸಿ ಮೋರ್ಚಾ ಖಂಡನೆ

Share

ದಾವಣಗೆರೆ-ರಾಜ್ಯ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ವಿರೋಧಿ ಧೋರಣೆಯನ್ನು ಹೊಂದಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಡಿ.ಎಸ್.ವೀರಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ೧೯೪೯ ನ. ೨೬. ರಂದು ಈ ದೇಶಕ್ಕೆ ಅಂಬೇಡ್ಕರ್ ಅವರು ಬರೆದ ಸಂವಿಧಾನ ಸಮರ್ಪಣೆಯಾಯಿತು. ಈ ದಿನವನ್ನು ರಾಷ್ಟ್ರಾದ್ಯಂತ ಸಮಾರ್ಪಣಾ ದಿನಾಚರಣೆ ಎಂದು ಕಳೆದ ಎರಡು ವರ್ಷಗಳಿಂದ ನ. ೨೬ ರಂದು ಆಚರಿಸಲು ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಘೋಷಣೆ ಮಾಡಿದರು. ಆದರೆ ಕಳೆದ ನ, ೨೬ ರಂದು ಅಂಬೇಡ್ಕರ್ ಭಾವಚಿತ್ರ ಬಳಸದೆ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಭಾವಚಿತ್ರವನ್ನು ಬಳಸಿಕೊಂಡರು. ಆದರೆ ಕೇಂದ್ರ ಸರ್ಕಾರ ಅಂಬೇಡ್ಕರ್ ಭಾವಚಿತ್ರವನ್ನು ಜಾಹೀರಾತುಗಳಲ್ಲಿ ಬಳಸಿತು. ಇಲ್ಲಿ ಮೋದಿ ದೊಡ್ಡವರ, ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡವರ ಎಂದು ಜನರೇ ನಿರ್ಧರಿಸಬೇಕು. ಕಳೆದ ಮೂರು ವರ್ಷಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿಶೇಷ ಯೋಜನಾ ಘಟಕದಡಿ ಒಟ್ಟು ೪೫.೫೦೦ ಕೋಟಿ ಹಣ ಮೀಸಲಿಡಲಾಗಿತ್ತು. ಇದರಲ್ಲಿ ಕೇವಲ ೨೬ ಸಾವಿರ ಕೋಟಿ ಹಣವನ್ನು ವೆಚ್ಚ ಮಾಡಲಾಗಿದೆ. ಕಾಯ್ದೆ ಜಾರಿಯಲ್ಲಿದ್ದರು ಸರ್ಕಾರ ಹಣ ಖರ್ಚು ಮಾಡಲು ವಿಫಲವಾಗಿದೆ. ಇತ್ತೀಚಿಗೆ ಅಂಬೇಡ್ಕರ್ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಸಂಕಿರಣ ಏರ್ಪಡಿಸಿ ಹತ್ತಾರು ಕೋಟಿ ಎಸ್ಸಿ ಎಸ್ಟಿ ಹಣವನ್ನು ವ್ಯಯಿಸಿ ಉಪಯೋಗವೇನು ಎಂದ ಅವರು ಪರಿಶಿಷ್ಟರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಎಸ್ಸಿ ಎಸ್ಟಿ ಜನಾಂಗದ ಅಭಿವೃದ್ದಿಗೆ ಯಾವುದೇ ಯೋಜನೆಗಳನ್ನು ಕೈಗೊಂಡಿಲ್ಲ. ನಮ್ಮ ಅವಧಿಯಲ್ಲಿ ಎಲ್ಲಾ ಪರಿಶಿಷ್ಟ ಪಂಗಡದವರು ವಾಸಿಸುವ ಕೇರಿಗಳಿಗೆ ಕಾಂಕ್ರೀಟ್ ರಸ್ತೆ, ಚರಂಡಿ, ಮನೆ ನಿರ್ಮಾಣಕ್ಕೆ ಹಕ್ಕುಪತ್ರಗಳನ್ನು ನೀಡಿದ್ದೇವು. ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಕೊಲೆಗಡುಕ ಸಚಿವರನ್ನು ಬಚಾವು ಮಾಡುವುದರಲ್ಲಿ ತಲ್ಲೀನವಾಗಿದೆ ಎಂದು ಆರೋಪಿಸಿದರು. ಬಡ್ತಿ ಮೀಸಲಾತಿ ಆ ಜನಾಂಗದ ಸಮಾನತೆಯ ಹಕ್ಕು ಇದನ್ನು ರಾಜ್ಯ ಬಿಜೆಪಿ ಬೆಂಬಲಿಸುತ್ತದೆ. ಅಂಬೇಡ್ಕರ್ ಕುರಿತು ಪೇಜಾವರಸ್ವಾಮೀಜಿಗಳು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸ್ವಾಮೀಜಿಗಳು ಯಾವ ದೃಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ ನಮಗೆ ಗೊತ್ತಿಲ್ಲ. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶದ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಹೀಗಾಗಿ ಸಂವಿಧಾನದ ಶಿಲ್ಪಿ ಎಂದು ಅಂದಿನ ರಾಷ್ಟ್ರಪತಿ ಡಾ.ಬಾಬುರಾಜೇಂದ್ರ ಪ್ರಸಾದ್ ಅವರೇ ಘೋಷಣೆ ಮಾಡಿದ್ದಾರೆ. ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದಿಂದ ರಾಜ್ಯಾದ್ಯಂತ ಬೃಹತ್ ಸಮಾವೇಶಗಳನ್ನು ಮಾಡುವ ಉದ್ದೇಶದಿಂದ ಇಂದು ದಾವಣಗೆರೆಯಲ್ಲಿ ಪೂರ್ವಭಾವಿ ಸಭೆಯನ್ನು ಮೋರ್ಚಾದ ವತಿಯಿಂದ ಕರೆಯಲಾಗಿದೆ. ಶೀಘ್ರದಲ್ಲಿಯೇ ಮೈಸೂರಿನಲ್ಲಿ ಎಸ್ಸಿ ಮೋರ್ಚಾದ ವತಿಯಿಂದ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತ್ ರಾವ್ ಜಾದವ್, ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆತ್ಮಾನಂದ, ನಾಗರಾಜ್ ಮಲ್ಲಾಡಿಹಳ್ಳಿ, ಪ್ರೊ.ಲಿಂಗಪ್ಪ, ರಮೇಶ್ ನಾಯ್ಕ್, ಹೆಚ್.ಎಸ್.ಶಿವಕುಮಾರ್, ರಾಜಶೇಖರ್, ಎಸ್.ಕೆ.ಬಸವರಾಜ್, ಎಲ್.ಡಿ.ಗೋಣೆಪ್ಪ, ಎರ್ರಿಸ್ವಾಮಿ ಬಾಲರಾಜ್, ಶಾಮನೂರು ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment on "ಅಂಬೇಡ್ಕರ್ ವಿರೋಧಿ ಧೋರಣೆ- ಬಿಜೆಪಿ ಎಸ್ಸಿ ಮೋರ್ಚಾ ಖಂಡನೆ"

Leave a comment

Your email address will not be published.


*