ಕಾಫೀ ಪದ್ದಣ್ಣ ಅಂದ್ರೆ ನಿಮ್ಗೆ ಗೊತ್ತುಂಟಾ ಮಾರಾಯ್ರೆ

Share

ದಾವಣಗೆರೆ-‘ಕಟೀಲು’ ಅಂದೊಡನೆ ಅಲ್ಲಿನ ದುರ್ಗಾ ಪರಮೇಶ್ವರಿ ಟೆಂಪಲ ಕಣ್ಣ ಮುಂದೆ ನಿಲ್ಲುತ್ತದೆ. ಕರಾವಳಿ ಕಡೆ ಮಾತ್ರವಲ್ಲ , ಇಡೀ ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಕಟೀಲು ಕೂಡ ಒಂದು.

ಇಂಥ ಪುಟ್ಟದೊಂದು ಊರಿಂದ ಎಳವೆಯಲ್ಲೇ ವಲಸೆ ಬಂದ ಬಾಲಕನೊಬ್ಬ ಬೆಳೆದು ನಿಂತ ಸಾಹಸದ ಕತೆ ಇದು…!
ಆಗಿನ್ನೂ ಪ್ರೈಮರಿ ಶಾಲೆ ಕಾಲ, ಐದನೇ ಕ್ಲಾಸ್ ನಂತರ ಯಾಕೋ ವಿದ್ಯೆ ಒಲಿಯಲಿಲ್ಲ. ಉಡುಪಿ ಮಠ ಸೇರಿ ವೇದ ಕಂಠಪಾಠಕ್ಕೆ ಮುಂದಾದ, ಅದಕ್ಕೂ ಬೈ ಹೇಳಿ. ಕೊನೆಗೆ ಜೂನ್ ತಿಂಗಳ ಮಳೆಗಾಲದ ಒಂದು ದಿನ ದಾವಣಗೆರೆ ಎಂಬ ಬಯಲುಸೀಮೆ ಕಡೆಗೆ ಬಸ್ ಹತ್ತಿದ. ಅಲ್ಲಿಂದ ಈ ಆರು ದಶಕ ತನಗೆ ತಾನೇ ಬೆರಗಾಗುವಂತೆ ಸುಂದರವಾದ ಬದುಕು ಕಟ್ಟಿಕೊಂಡ.. !

ಅದೇನೋ ಗೊತ್ತಿಲ್ಲ, ಕರಾವಳಿಗರಿಗೆ ಹೋಟೆಲ್ ಉದ್ಯಮ ಕರಗತ ಅಥವಾ ರಕ್ತಗತ. ಎಲ್ಲ ಬಾಲಕರಂತೆ ಈ ಹುಡುಗ ಕೂಡ ದಾವಣಗೆರೆ ಹೋಟೆಲೊಂದರಲ್ಲಿ ಬೆವರು ಬಸಿದ. ಐದಾರು ವರ್ಷಗಳು ಈ ಅರೆ ಊಟದ, ನಿದ್ದೆಗೆಟ್ಟ ರಾತ್ರಿಗಳಲ್ಲಿ ಕರಗಿ ಹೋದವು. ಆಗ ಒಳ ಮನಸ್ಸು ಸ್ವಂತದ್ದರ ಕಡೆ ಜಿಗಿಯುತ್ತಿತ್ತು. ಅಲ್ಲಿಂದ ಹೊರಬಿದ್ದವನೇ ತಿರುಗಿ ನೋಡಲಿಲ್ಲ.

ಒಂದಷ್ಟು ಸಾಲ ಎತ್ತಿದ, ಬಾಪೂಜಿ ವಿದ್ಯಾ ಸಂಸ್ಥೆ ಕಚೇರಿ ಎದುರು ಒಂದು ಕಾರ್ನರ್ ಮಳಿಗೆಯಲ್ಲಿ ಸಣ್ಣದಾಗಿ ಸ್ಟೇಷನರಿ ಷಾಪ್ ತೆರೆದ. ಯಾಕೋ ಕೈ ಹಿಡಿಯಲಿಲ್ಲ, ಅಲ್ಲೇ ಮೂಲೆಯಲ್ಲಿ ಒಂದು ಸ್ಟವ್ ಇಟ್ಟು ಚಹಾ ಕುದಿಸಲಾರಂಭಿಸಿದ… ಅಲ್ಲಿಂದ ಗರಂಗರಂ ಚಹಾ ಈತನ ಜೀವನ ದೆಸೆಯೇ ಕುಲಾಯಿಸಿಬಿಟ್ಟಿತು. ಅದಕ್ಕೊಂದು ಚೆಂದನೆ ಹೆಸರಿಟ್ಟಾಯಿತು. ಹೀಗೆ ೧೯೭೫ರಲ್ಲಿ ತಲೆ ಎತ್ತಿದ ಆ ಪುಟ್ಟ ಕ್ಯಾಂಟೀನ್ ಹೆಸರೇ ‘ಪದ್ದು ಕಾಫೀ ಬಾರ್.’ ಇದರ ಮಾಲೀಕ ಪದ್ಮನಾಭಭಟ್ ಅಲಿಯಾಸ್ ಪದ್ದಣ್ಣ.

ಆವೊತ್ತಿನಿಂದ ಈ ದಿನದವರೆಗೂ ಅಜಮಾಸು ನಾಲ್ಕು ದಶಕದಿಂದ ಇಲ್ಲಿ ಚಹಾ ಕುದಿಯುತ್ತಲೇ ಇದೆ. ದಾವಣಗೆರಿಗರು ಪದ್ದಣ್ಣನ ಅಂಗಡಿಯಲ್ಲಿ ನಿಂತು ಸ್ವಾದಿಷ್ಟ ಚಹಾ ಹೀರುತ್ತಲೇ ಮಾತಿಗೆ ಮಾತು ಮಥಿಸಿದ್ದಾರೆ, ಹಸಿಬಿಸಿ ಸುದ್ದಿ ಬೆಚ್ಚಗಿರಿಸಿದ್ದಾರೆ.
ಎಷ್ಟಾದರೂ ಇದು ಕಾಲೇಜುಗಳ ರಸ್ತೆ. ಎವಿಕೆ ಕಾಲೇಜು, ಆರ್ಎಲ ಲಾ ಕಾಲೇಜು, ಎಂಎಸ್ಬಿ ಕಾಲೇಜು, ಎಂಜಿ ಕಾಲೇಜು, ಎಲ್ಲವೂ ಒಂದೇ ವಠಾರದ ಮನೆಗಳಂತಿವೆ. ಇಲ್ಲಿನ ನೂರಾರು ಅಧ್ಯಾಪಕರು, ಸಾವಿರಾರು ವಿದ್ಯಾರ್ಥಿಗಳಿಗೆ ಇದೊಂದು ಮೀಟ್ ಪಾಯಿಂಟ್, ಹಾಗೇ ಬೈ ಟೂ ಚಹ ಗುಟುಕಿಸುತ್ತಾ ಹರಟುವ ಸ್ಪಾಟ್ ಕೂಡ.

ಇದೊಂದು ಕಾರ್ನರ್ ಕ್ಯಾಂಟೀನ್ ಆಗಿದ್ದರೂ ಈ ಚಹಾದಂಗಡಿಗೇ ತನ್ನದೇಯಾದ ಒಂದು ಚರಿಷ್ಮಾವೂ ಇದೆ. ಇಲ್ಲಿ ಬೆಳಗಿನಿಂದ ಸಂಜೆವರೆಗೂ ಲೋಕದ ವಿದ್ಯಮಾನಗಳ ಮಾತು ಮಂಥನ ಕುದಿಯುತ್ತದೆ. ಅಲ್ಲಿ ಚಹಾ ಜೊತೆ ನ್ಯೂಸ್ ಪೇಪರ್, ಮ್ಯಾಗಜೀನ್ಸ್ ಕೂಡ ಲಭ್ಯ. ಆಗಷ್ಟೇ ಬಂದು ಬಿದ್ದ ಬ್ರೇಕಿಂಗ್ ಸುದ್ದಿಗಳದೇ ಗಮ್ಮತ್ತು. ಬೆಳಗಿನ ಹೊತ್ತಿಗೆ ವಾಯು ವಿಹಾರಿಗಳ, ಕ್ರೀಡಾಪಟುಗಳ ಹರಟೆ ಕಟ್ಟೆ, ಹಗಲಿಡೀ ಬುದ್ಧಿಜೀವಿಗಳ, ಚಿಂತಕರ ಚಾವಡಿ, ಇಳಿಸಂಜೆಗೆ ಲಾಭ-ನಷ್ಟ ಲೆಕ್ಕಾಚಾರದ ವರ್ತಕರ ಜಗುಲಿ…!
ಪದ್ದಣ್ಣನ ಕ್ಯಾಂಟೀನ್ಗೆ ಬುದ್ದಿಜೀವಿಗಳ ಅವಿನಾಭಾವ ನಂಟಿದೆ.ಪ್ರೊ.ಎಸ್.ಎಚ್.ಪಟೇಲ್, ಡಾ.ಎಂ.ಜಿ.ಈಶ್ವರಪ್ಪ, ಪ್ರೊ.ಹಾಲಪ್ಪ, ಡಾ.ಬಿ.ಜಿ.ನಾಗರಾಜ್, ಹೀಗೆ ಬಾಪೂಜಿ ಸಂಸ್ಥೆ ಕಾಲೇಜುಗಳ ಅನೇಕ ಮೇಷ್ಟ್ರುಗಳು ಇಲ್ಲಿನ ಕಡು ಚಹಾ ಕುಡಿಯುತ್ತಲೇ ತಮ್ಮ ಅಧ್ಯಾಪನವನ್ನು ಉದ್ದೀಪನಗೊಳಿಸಿಕೊಂಡವರು..

ಹೀಗೆ ಚಹಾ ಮಾರುತ್ತಿದ್ದವರು ಏನೆಲ್ಲ ಆಗಿದ್ದಾರೆ. ದೇಶದ ಪ್ರಧಾನಿ ಹುದ್ದೆಗೂ ಏರಿರಬಹುದು. ಆ ದಾರಿಯೇ ಬೇರೆ ಬಿಡಿ. ಆದರೆ, ನಮ್ಮ ಪದ್ದಣ್ಣ ಬರೀ ಚಹಾ ಸೋಸುತ್ತಲೇ ಜಗತ್ತಿನ ಹತ್ತಾರು ದೇಶ ಸುತ್ತಿ ಬಂದಿದ್ದಾನೆ. ಕೇವಲ ಐದನೇ ಇಯತ್ ಓದಿದಂಥ ಚಹದಂಗಡಿ ಮಾಲೀಕನೊಬ್ಬ ಈ ಎತ್ತರಕ್ಕೇರಲು ಸಾಧವೇ? ಎಂದು ಚಕಿತಗೊಳಿಸಿದ್ದಾನೆ.

ಕಳೆದ ಹತ್ತು ವರ್ಷದಲ್ಲಿ ಚೀನಾ, ರಷ್ಯಾ, ಅಮೇರಿಕಾ, ಸಿಂಗಾಪೂರ್, ಹಾಂಕಾಂಗ್, ದುಬೈ, ಯುರೋಪಿಯನ್ ದೇಶಗಳ ಪರ್ಯಟನೆ ಮುಗಿಸಿದ ಹೆಗ್ಗಳಿಕೆ ಪದ್ದಣ್ಣನದು. ಹಾಗೆಂದು ಅಲ್ಲಿ ಯಾರೂ ನಂಟರಿಷ್ಟರಿಲ್ಲ. ಬಂಧು-ಮಿತ್ರರಿಲ್ಲ. ಸುಮ್ಮನೆ ಒಮ್ಮೆ ಗೆಳೆಯರ ಜೊತೆ ದೇಶ ಸುತ್ತುವ ಖಯಾಲಿ ಅಷ್ಟೇ.

ಈ ನಡುವೆ ಕ್ಯಾಂಟೀನ್ ನಿಭಾಯಿಸುತ್ತಲೇ ಕೆಲ ಕಾಲ ಬಾಪೂಜಿ ವಿದ್ಯಾ ಸಂಸ್ಥೆಯ ಕಾಲೇಜುಗಳ ಹಾಸ್ಟೆಲ್ ನಿರ್ವಹಿಸಿದ ಶ್ರಮಜೀವಿ ಕೂಡ.

ಪದ್ದಣ್ಣ ಅಪ್ಪಟ ಕಾಯಕ ಜೀವಿ. ದಾವಣಗೆರೆ ಯಲ್ಲಿ ಸ್ವಂತಕ್ಕೊಂದು ಮನೆ, ಮೂವರು ಹೆಣ್ಣು ಮಕ್ಕಳ ಮದುವೆ, ಮಗನ ಓದು, ನೆಂಟರಿಷ್ಟರಿಗೆ ಒಂದಷ್ಟು ಆಸರೆ. ತನ್ನ ಗಳಿಕೆಯಲ್ಲೇ ಒಂದು ಪಾಲು ದಾವಣಗೆರೆ ವಿವಿಯಲ್ಲಿ ಪ್ರತಿಭಾವಂತ ಮಕ್ಕಳ ಸ್ಕಾಲರ್ಷಿಪ್ಗೆ ಒಂದಷ್ಟು ಮೊತ್ತ ಠೇವಣಿ, ಹುಟ್ಟೂರು ಕಟೀಲಿನಲ್ಲಿ ಯಕ್ಷಗಾನಕ್ಕೆಂದೇ ಒಂದಷ್ಟು ಹಣ ಮುಡಿಪು, ಹೀಗೆ ಒಂದು ಶಿಸ್ತು ರೂಢಿಸಿಕೊಂಡ ಮನುಷ್ಯನಿಗೆ ಈ ಎಪ್ಪತ್ತರ ಪ್ಲಸ್ನಲ್ಲೂ ಬದುಕಿನ ಉತ್ಸಾಹ ಒಂಚೂರೂ ಮುಕ್ಕಾಗಿಲ್ಲ. ಇದಕ್ಕೇ ಆತನಂಗಡಿಯ ‘ಖಡಕ್ ಚಹಾ’ ಅಲ್ಲದೇ ಬೇರೇನೂ ಅಲ್ಲ…!

(ಕೃಪೆ : ವಿಜಯಕರ್ನಾಟಕ)

Be the first to comment on "ಕಾಫೀ ಪದ್ದಣ್ಣ ಅಂದ್ರೆ ನಿಮ್ಗೆ ಗೊತ್ತುಂಟಾ ಮಾರಾಯ್ರೆ"

Leave a comment

Your email address will not be published.


*