ಡಿಸೆಂಬರ್ ೧೬ರಿಂದ ತುಂಗಾ ಏತ ನೀರಾವರಿ ಪ್ರಾಯೋಗಿಕ ಕಾರ್ಯಾರಂಭ :ಸಚಿವ ಕಾಗೋಡು ತಿಮ್ಮಪ್ಪ

Share

ಶಿವಮೊಗ್ಗ : ಜಿಲ್ಲೆಯ ಮಹತ್ವಾಕಾಂಕ್ಷೆಯ ತುಂಗಾ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದು, ಡಿಸೆಂಬರ್ ೧೬ರಂದು ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ತುಂಗಾ ಏತ ನೀರಾವರಿ ಯೋಜನೆಯನ್ನು ಡಿಸೆಂಬರ್ ೧೬ರಂದು ಪ್ರಾಯೋಗಿಕ ಕಾರ್ಯಾರಂಭ ಮಾಡಲು ಎಲ್ಲಾ ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯೋಜನೆ ವಿವರ: ತುಂಗಾ ಏತ ನೀರಾವರಿ ಯೋಜನೆಯನ್ನು ಕೃಷ್ಣಾ ಕೊಳ್ಳದ ಅಡಿ ಹಂಚಿಕೆಯಾಗಿರುವ ನೀರಿನ ಪ್ರಮಾಣದಲ್ಲಿ ೧.೩೪೭ ಟಿಎಂಸಿ ನೀರನ್ನು ಈ ಯೋಜನೆಗೆ ಬಳಸಿಕೊಂಡು ೭೧.೩೩ ಕೋಟಿ ರೂ. ಮೊತ್ತದ ಯೋಜನಾ ವರದಿಗೆ ೨೦೧೨ರಲ್ಲಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈ ಯೋಜನೆಯಿಂದ ಶಿವಮೊಗ್ಗ ತಾಲೂಕಿನ ಹಾಯ್ಹೊಳೆ, ಬಾರೇಹಳ್ಳ ಹಾಗೂ ಗೌಡನ ಕೆರೆಯ ಕೆಳಭಾಗದಲ್ಲಿ ಬರುವ ಕೆರೆಗಳ ಅಚ್ಚುಕಟ್ಟು ಪ್ರದೇಶಗಳಿಗೆ ಅನುಕೂಲವಾಗುವಂತೆ ನೀರನ್ನು ಒದಗಿಸಲಾಗುವುದು.

ಈ ಯೋಜನೆಯು ಎರಡು ಕೊಳವೆ ಮಾರ್ಗಗಳನ್ನು ಒಳಗೊಂಡಿವೆ. ಮೊದಲನೆಯ ಏರು ಕೊಳವೆ ಮಾರ್ಗದಲ್ಲಿ ಹರಕೆರೆ ಹತ್ತಿರ ತುಂಗಾ ನದಿಯಿಂದ ಜಾಕ್ವೆಲ್ ಮೂಲಕ ಒಟ್ಟು ೮೫.೬ಮೀಟರ್ ಎತ್ತರಕ್ಕೆ ನೀರನ್ನು ಎತ್ತಿ, ೨೩೫೦ ಮೀಟರ್ ದೂರದಲ್ಲಿರುವ ವಿಂಗಡನಾ ಸ್ಥಳಕ್ಕೆ ಸಾಗಿಸಿ ಅಲ್ಲಿಂದ ೭೭೨೦ ಮೀಟರ್ ದೂರದಲ್ಲಿರುವ ಹಾಯ್ಹೊಳೆ ಕೆರೆಗೆ ಮತ್ತು ೮೫೪೫ ಮೀಟರ್ ದೂರದಲ್ಲಿರುವ ಬಾರೇಹಳ್ಳ ಕೆರೆಗೆ ನೀರೊದಗಿಸಲಾಗುವುದು.

೨ನೇ ಕೊಳವೆ ಮಾರ್ಗದಲ್ಲಿ ಜಾಕ್ವೆಲ್ ಮೂಲಕ ೧೨೪.೫ಮೀ ಎತ್ತರಕ್ಕೆ ನೀರನ್ನು ಎತ್ತಿ, ೧೫೯೧೦ ಮೀಟರ್ ದೂರದವರೆಗೆ ಏರು ಕೊಳವೆ ಮೂಲಕ ಸಾಗಿಸಿ ನಂತರ ಗ್ರಾವಿಟಿ ಮೂಲಕ ೪೪೮೦ ಮೀಟರ್ ದೂರದಲ್ಲಿರುವ ಗೌಡನ ಕೆರೆಗೆ ನೀರು ಒದಗಿಸಿ, ನಂತರ ಗೌಡನ ಕೆರೆಯ ಕೆಳಭಾಗದಲ್ಲಿ ಬರುವ ಕೆರೆಗಳಿಗೆ ನೈಸರ್ಗಿಕ ಕಾಲುವೆ ಮೂಲಕ ನೀರನ್ನು ಹರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಚಿವರ ಅಸಮಾಧಾನ: ಹೊಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಅನುಷ್ಟಾನದ ಕುರಿತು ಸಚಿವರು ಈ ಸಂದರ್ಭದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ೧೦ವರ್ಷಗಳಿಂದ ಯೋಜನೆ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಇದೀಗ ಪೈಪ್ಲೈನ್ನಲ್ಲಿ ನೀರು ಸೋರುವಿಕೆ ಕುರಿತು ವರದಿಗಳು ಬಂದಿದ್ದು, ಯೋಜನೆಯ ಅನುಷ್ಟಾನದ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡಲು ಮುಖ್ಯ ಇಂಜಿನಿಯರ್ ಅವರಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment on "ಡಿಸೆಂಬರ್ ೧೬ರಿಂದ ತುಂಗಾ ಏತ ನೀರಾವರಿ ಪ್ರಾಯೋಗಿಕ ಕಾರ್ಯಾರಂಭ :ಸಚಿವ ಕಾಗೋಡು ತಿಮ್ಮಪ್ಪ"

Leave a comment

Your email address will not be published.


*