ಬ್ಯಾಂಕಿಂಗ್+ಬರವಣಿಗೆ=ಎರ್ರಿಸ್ವಾಮಿ

Share

ಕಡುಬಡತನದ ಕುಟುಂಬ ಹಾಗೇ ಅತ್ಯಂತ ಹಿಂದುಳಿದ ತಾಲ್ಲೂಕೆಂಬ ಹಣೆಪಟ್ಟಿ ಹೊಂದಿರುವ ಜಗಳೂರು ಹಾಗೂ ಪರಿಶಿಷ್ಟ ಪಂಗಡದ ಕುಡಿಯಾಗಿ ಹಾಲೇಹಳ್ಳಿಯಲ್ಲಿ ಜನಿಸಿರುವ ಎನ್.ಟಿ.ಯರ್ರಿಸ್ವಾಮಿ ಇದೀಗ ಕೆನರಾ ಬ್ಯಾಂಕ್ನ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಯಾಂಕ್ ಅಂದಾಕ್ಷಣ ಹಣದ ಲೆಕ್ಕಾಚಾರದಲ್ಲಿ ಮುಳುಗುವುದರಲ್ಲೇ ದಿನವಿಡೀ ಹೈರಾಣ ಎನಿಸುತ್ತದೆ. ಆದಾಗ್ಯೂ ೧೯೭೯ರಿಂದ ಬ್ಯಾಂಕಿಂಗ್ ಉದ್ಯೋಗಕ್ಕೆ ಸೇರಿದ ಇವರು ರಾಜ್ಯದ ಅನೇಕ ಕಡೆ ವಿವಿಧ ಹಂತದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಬರೀ ಹುದ್ದೆಗೆ ಮತ್ತು ನಿರ್ದಿಷ್ಟ ಕೆಲಸಕ್ಕಷ್ಟೇ ಸೀಮಿತರಾಗದೆ ಬ್ಯಾಂಕ್ನ ಉಪಯೋಗ ನಿಜವಾದ ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂಬುದು ಇವರ ಕಾಳಜಿಯಾಗಿದೆ. ನಿಗದಿತ ಕೆಲಸಕ್ಕೆ ಸೂಕ್ತವೆಂಬಂತೆ ಹೆಚ್ಚುವರಿಯಾಗಿ ಆಸಕ್ತಿ ವಹಿಸಿ ಬ್ಯಾಂಕ್ನ ಚಟುವಟಿಕೆಯನ್ನು ಚೊಕ್ಕವಾಗಿ ನಿರ್ವಹಿಸುವುದರ ಜೊತೆಯಲ್ಲೇ ಫಲಾನುಭವಿಯ ಹಿತಕಾಯುವಲ್ಲೂ ಇವರು ಕಾಳಜಿ ವಹಿಸಿದ್ದರೆ. ಮಹಿಳಾ ಸ್ವಸಹಾಯ ಸಂಘದ ರಚನೆಯಲ್ಲೂ ಇವರ ಪಾತ್ರ ಗಮನಾರ್ಹವೆನಿಸಿದೆ. ಸಾಲ ನೀಡುವಿಕೆ ಮತ್ತು ಮರುಪಾವತಿಯ ಪ್ರಗತಿಯೂ ಇವರ ಸೇವಾ ಚಟುವಟಿಕೆಗೆ ಉತ್ತಮ ಸ್ಪಂದನೆಯನ್ನು ನೀಡಿದೆ.

ಬ್ಯಾಂಕ್ನ ಚಟುವಟಿಕೆಗಳಿಗೇ ಮಾತ್ರ ಸೀಮಿತರಾಗಿದ್ದರೆ ಎರ್ರಿಸ್ವಾಮಿಯವರಲ್ಲಿ ವಿಶೇಷತೆ ಏನೂ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಇವರ ಬರವಣಿಗೆಯ ಗೀಳು ಸಹ ಬರೀ ಬ್ಯಾಂಕ್ ಸಿಬ್ಬಂದಿಯನ್ನಷ್ಟೇ ಅಲ್ಲದೆ ಸಾಹಿತ್ಯಿಕ ವಲಯವೂ ಸೋಜಿಗ ಪಟ್ಟುಕೊಳ್ಳುವಂತೆ ಮಾಡಿದೆ. ಬ್ಯಾಂಕ್ನ ನಿರಂತರ ಕೆಲಸದ ಮಧ್ಯೆಯೇ ಇವರು ಸುಮಾರು ಇಪ್ಪತ್ತಾರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇನ್ನು ಬಿಡಿ ಬರಹಗಳ ಸಂಖ್ಯೆಯೂ ಸಾಕಷ್ಟಿದೆ. ಕಾದಂಬರಿ, ಜೀವನ ಚರಿತ್ರೆ, ಕವನ, ಕಥಾ ಸಂಕಲನ ಕೃತಿಗಳು ಇದರ ಪಟ್ಟಿಯಲ್ಲಿವೆ. ಬ್ಯಾಂಕಿಂಗ್ ಮಾಹಿತಿ ಸಂಬಂಧ ಕೂಡ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಸಂಪರ್ಕದಲ್ಲಿರುವ ಇವರು ಜಿಲ್ಲಾ ಮತ್ತು ರಾಜ್ಯಮಟ್ಟದ ಸಮ್ಮೇಳನಗಳ ಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ವಿಜ್ಞಾನ ಪರಿಷತ್ತು, ಸಾಹಿತ್ಯ ವೇದಿP, ಜಿಲ್ಲೆ ಸಮಾಚಾರ ಪತ್ರಿಕಾ ಬಳಗ ಹೀಗೆ ಹಲವಾರು ಸಂಘಟನೆಗಳೊಂದಿಗೆ ಕ್ರಿಯಾಶೀಲರಾಗಿರುವ ಇವರು ಸಾಹಿತ್ಯಿಕ ಚಟುವಟಿಕೆಗಳೆಂದರೆ ಅತೀವ ಆಸಕ್ತಿಯಿಂದ ಭಾಗವಹಿಸುತ್ತಾರೆ.
ಪ್ರಶಸ್ತಿ, ಸನ್ಮಾನಗಳ ಪಟ್ಟಿಯೂ ದೊಡ್ಡದಿದೆ. ಗೊರರು ಸಾಹಿತ್ಯ ಪ್ರಶಸ್ತಿ, ವಾಲ್ಮೀಕಿ ಪ್ರಶಸ್ತಿ, ಸಿದ್ದಯ್ಯ ಪುರಾಣಿಕ್ ಸಾಹಿತ್ಯ ಪ್ರಶಸ್ತಿ, ಜಗಳೂರು ಸಿರಿ ಪ್ರಶಸ್ತಿ, ಗ್ರಾಮೀಣ ಸಾಹಿತ್ಯ ಪರಿಷತ್ನ ಸನ್ಮಾನ, ಗ್ರಾಮೀಣಾಭಿವೃದ್ದಿಯ ಹರಿಕಾರ ಪ್ರಶಂಸೆಯ ಸನ್ಮಾನ, ಬ್ಯಾಂಕ್ನ ಹಿರಿಯ ಅಧಿಕಾರಿಗಳಿಂದಲೂ ಉತ್ತಮ ಕಾರ್ಯನಿರ್ವಹಣೆಗೆ ಸನ್ಮಾನ…ಹೀಗೆ ಇವರಿಗೆ ಸಂದ ಗೌರವಗಳು ಸಾಕಷ್ಟಿವೆ.

ಅಪ್ಪಟ ಹಳ್ಳಿಯ ಪ್ರತಿಭೆಯಾಗಿದ್ದರೂ ಬರಹದಷ್ಟೇ ಓದುವಿಕೆಗೂ ಕಾಳಜಿ ವಹಿಸುವ ಎರ್ರಿಸ್ವಾಮಿ ಈ ಎಲ್ಲಾ ಚಟುವಟಿಕೆ, ಕೆಲಸಗಳನ್ನು ಸುಸ್ತು ಎನ್ನುವಂತಹ ನಿಲುವಿನಿಂದಲೇ ದೂರ ಉಳಿದು ನಗುಮೊಗದಿಂದ ಕಾರ್ಯಪ್ರವೃತ್ತ್ತರಾಗಿರುವುದನ್ನು ಗಮನಿಸುವ ಯಾರಾಗಾದರೂ ಇವರ ಅಗಾಧ ಕ್ರಿಯಾಶೀಲತ್ವದ ವಿಶ್ವರೂಪ ಕಂಡು ಬೆರಗಾಗುವ ಸಂದರ್ಭಗಳೇ ಹೆಚ್ಚು ಎನ್ನಬಹುದು.

Be the first to comment on "ಬ್ಯಾಂಕಿಂಗ್+ಬರವಣಿಗೆ=ಎರ್ರಿಸ್ವಾಮಿ"

Leave a comment

Your email address will not be published.


*