ರಾತ್ರಿ ಮಾತ್ರ ನಿಮ್ಮದೇ…. ನಿದ್ರೆಯದೇ ಸರ್ವಾಧಿಕಾರ!!

Share

ಕತ್ತಲೆಯ ಭೂತವಾಗಿ ಕಾಡುತ್ತದೆ. ನೀರವ ನಿಶಬ್ದದಲ್ಲೂ ಪೈಶಾಚಿಕ ಧಾಟಿಯಲ್ಲಿ ಶಾಪ ಹಾಕುತ್ತದೆ. ಆಲೋಚನೆಗಳು ಕೊಳ್ಳಿದೆವ್ವಗಳಾಗಿ ದಾಳಿ ಮಾಡುತ್ತವೆ. ಎಷ್ಟು ಹೊರಳಾಡಿದರೂ ನಿದ್ರೆ ಬರುತ್ತಲೇ ಇಲ್ಲ. ನಿದ್ರಾಹೀನತೆ ಒಂದು ದೊಡ್ಡ ಸಮಸ್ಯೆ. ಅದನ್ನು ಮೀರಿಸುವಂತಹ ಮಾನಸಿಕ ಹಿಂಸೆ. ರೆಪ್ಪೆಯು ಕೂಲಾಗಿ ಇರುವ ಸ್ಥಿತಿ ನಮಗೆ ದೊರೆಯಬೇಕಾಗಿದೆ.

ಪ್ರತ್ಯೇಕವಾದ ಬೆಡ್‌ರೂಂಗಳಿವೆ. ವಿಶಾಲವಾದ ಮಂಚದಲ್ಲಿ ಬೆಡ್‌ಗಳಿವೆ. ಬೆಚ್ಚನೆಯ ಹೊದಿಕೆ……….ಜೊತೆಗೆ ಏರ್ ಕಂಡೀಷನರ್ ವ್ಯವಸ್ಥೆಯೂ ಉಂಟು. ಆದರೆ……ಆದರೆ ನಿದ್ರೆಯೇ ಬರುತ್ತಿಲ್ಲ. ಒಂದೂವರೆ ದಶಕಕ್ಕೆ ಹೋಲಿಸಿದರೆ ಸಂಪಾದನೆ ಕೂಡ ಹೆಚ್ಚಿದೆ. ಸಂಪತ್ತು ವಿಸ್ತರಿಸಿದೆ. ಜೀವನದ ಸ್ಥಿತಿಗತಿಯೂ ಸುಧಾರಿಸಿದೆ. ಆದರೆ ನಿದ್ರೆಯ ಸುಖವೇ ಮಾಯವಾದಂತಾಗಿದೆ. ಸರಾಸರಿ ಎಂಟು ಗಂಟೆಗಳ ನಿದ್ರೆ, ಈಗ ನಾಲ್ಕೈದು ಗಂಟೆಗೆ ಕುಸಿದಿದೆ. ಇದಕ್ಕೆ ಕಾರಣಗಳು ಬಹಳಷ್ಟಿವೆ.

ಕೆಲವರಿಗೆ ನಿದ್ರೆಯೆಂಬುದೇ ಕನಸಾಗುತ್ತಿದೆ. ಕಣ್ಣುಗಳ ರೆಪ್ಪೆಯನ್ನು ಮುಚ್ಚಿಕೊಂಡರೆ ಸಾಕು.. ವೃತ್ತಿ, ಉದ್ಯೋಗದಲ್ಲಿನ ಡೆಡ್‌ಲೈನ್‌ಗಳು ಸಾವಿನ ಎಚ್ಚರಿಕೆಯಂತೆ ಕಾಡುತ್ತವೆ. ಕಡೆಯ ದಿನ ಹತ್ತಿರವಾಗಿದೆಯೆಂದು ಸಾಲದ ಕಮಿಟ್‌ಮೆಂಟ್‌ಗಳು ಕುಣಿದಾಡುತ್ತವೆ. ಅಭದ್ರತೆ, ಬಲಹೀನತೆಗಳ ಆಟವೂ ಜೋರಾಗಿರುತ್ತದೆ. ಒಂದೇ ಎಂಬುದಿಲ್ಲ. ಆಧುನಿಕ ಜೀವನದ ಜಾಡ್ಯಗಳೆಲ್ಲಾ ಜೊತೆಯಾಗಿ ಸುಖಕರ ನಿದ್ರೆಯನ್ನು ಬಲಿ ಪಡೆಯುತ್ತವೆ.

ನಲವತ್ತು ದಾಟಿದವರಲ್ಲಿ ಶೇ.೪೦ ರಷ್ಟು ಮಂದಿ, ಅರವತ್ತು ದಾಟಿದವರಲ್ಲಿ ಶೇ.೮೦ರಷ್ಟು ಮಂದಿ ನಿದ್ರಾಭಂಗ ಸಮಸ್ಯೆಯಲ್ಲಿ ಸಿಲುಕಿರುತ್ತಾರೆ ಎಂಬುದು ಅಧ್ಯಯನಗಳಲ್ಲಿ ಬೆಳಕಿಗೆ ಬಂದಿದೆ. ಗ್ರಾಮೀಣ ಭಾರತಕ್ಕೆ ಹೋಲಿಸಿದರೆ ಪಟ್ಟಣ ಪ್ರದೇಶಗಳಲ್ಲಿ ಈ ಸಮಸ್ಯೆ ಮತ್ತಷ್ಟು ಘೋರ.

ನಿದ್ರೆಯನ್ನು ಒಂದು ಅಗತ್ಯ ಎಂದು ಗುರ್ತಿಸುತ್ತಿಲ್ಲ. ನಿತ್ಯವೂ ಏಳೆಂಟು ಗಂಟೆಗಳಷ್ಟು ಮಲಗಬೇಕು ಎಂಬ ಕಾಳಜಿಯೇ ಇಲ್ಲ. ಕೆಲಸವಿಲ್ಲದವರ (ಸೋಮಾರಿಗಳ) ಅಭ್ಯಾಸ ಇದು ಎಂಬ ಧೋರಣೆಯೂ ಇದೆ.ನಿದ್ರೆ ಮಾಡದಿರುವುದೇ `ಹೀರೋಯಿಸಂ’ ಎಂಬ ಟ್ರೆಂಡ್ ಸಹ ಇದೆ. ವ್ಯಕ್ತಿತ್ವ ವಿಕಸನದ ಪುಸ್ತಕಗಳಲ್ಲಿ ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಶ್ರಮಿಸಿದನು. ಗುರಿಯನ್ನು ಸಾಧಿಸುವವರೆಗೂ ರೆಪ್ಪೆಯನ್ನು ಮುಚ್ಚಲಿಲ್ಲ….ಈ ರೀತಿಯ ಪ್ರಚೋದನಾತ್ಮಕ ವಾಕ್ಯಗಳು ಗಮನ ಸೆಳೆಯುತ್ತವೆ.

ಜೀವನದಲ್ಲಿ ಮೂರನೇ ಭಾಗ ನಿದ್ರೆಗೆ ಸರಿ ಹೋಗುತ್ತದೆ ಎಂದು ಹೀಗಳೆಯುವವರೂ ಉಂಟು. ಈ ಹಾಳಾದ್ದು ನಿದ್ರೆಯೇ ಇಲ್ಲದಾಗಿದ್ದರೆ ಆ ಏಳೆಂಟು ಗಂಟೆಗಳಲ್ಲಿ ಇನ್ನಷ್ಟು ಸಂಪಾದಿಸಲಿಕ್ಕೋ, ಇಲ್ಲವೆ ಕೆರಿಯರ್ ನಲ್ಲಿ ಇನ್ನು ಕೆಲವು ಮೆಟ್ಟಿಲುಗಳನ್ನು ಮೇಲೇರಲಿಕ್ಕೋ ಆಗುತ್ತಿತ್ತು ಎಂದುಕೊಳ್ಳುವವರಿಗೂ ಕಡಿಮೆಯೇನಿಲ್ಲ.

ನಿದ್ರೆಯ ಅಗತ್ಯವೇನೆಂಬುದು, ನಿದ್ರೆ ಆಗದಿದ್ದಾಗಲೇ ಗೊತ್ತಾಗುತ್ತದೆ. ತಿಂದಿದ್ದೇವೆಯೋ ಇಲ್ಲವೋ ಎಂಬುದರ ಅರಿವು ಇರುವುದಿಲ್ಲ. ಹಾಸಿಗೆ, ದಿಂಬಿನ ಕಾಳಜಿಯೂ ಇಲ್ಲ. ಹಗಲು-ರಾತ್ರಿಯೆಂಬುದೂ ಅಪಸ್ವರವಾಗುತ್ತದೆ. ಕೈಯಲ್ಲಿ ಕಾರ್, ಸ್ಟಿರಿಯಂಗ್ ಇದೆಯೆ? ಕಣ್ಣೆದುರು ಲ್ಯಾಪ್‌ಟಾಪ್ ಕೆಲಸ ಮಾಡುತ್ತಿದೆಯೇ ಎಂಬುದರ ಅರಿವೂ ಇರದು. ಬಾಸ್ ಕಿರಿಕ್ ಮಾಡುತ್ತಿದ್ದಾರಾ, ಸಹದ್ಯೋಗಿಗಳು ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರಾ ಎಂಬುದರ ಗಂಭೀರತೆಯೂ ಇರುವುದಿಲ್ಲ. ಯಾವುದರ ಅರಿವೂ ಇಲ್ಲದಂತೆ ಕಣ್ಣರೆಪ್ಪೆಗಳು ಮುಚ್ಚಲ್ಪಡುತ್ತವೆ. ಪ್ರಕೃತಿಗೆ ಉದಯ-ಅಸ್ತಮಾನ ಹೇಗೋ… ಮನುಷ್ಯನಿಗೆ ನಿದ್ರೆ… ಎದ್ದೇಳುವಿಕೆ… ಬೇಕೇ ಬೇಕು. ಆ ಚಕ್ರ ತಿರುಗುತ್ತಿರಬೇಕು. ನಿಂತು ಹೋದರೆ ಗೋವಿಂದಾ…!

ಮಗು ಗಾಢ ನಿದ್ರೆಗೆ ಜಾರುವ ಆ ಸ್ವಲ್ಪ ಸಮಯದಲ್ಲೇ ತಾಯಿಯು ಅಡುಗೆ ಮನೆಯ ಕೆಲಸಗಳನ್ನು ಪೂರ್ತಿ ಮಾಡಿಕೊಳ್ಳುವಂತೆ ನಾವು ನಿದ್ರೆಗೆ ತೆಗೆದುಕೊಳ್ಳುವ ಆ ಏಳೆಂಟು ಗಂಟೆಗಳ ಅವಧಿಯಲ್ಲೇ ಶರೀರವು ಮುಖ್ಯವಾದ ಜವಾಬ್ದಾರಿಗಳನ್ನು ಪೂರ್ತಿ ಮಾಡಿಕೊಳ್ಳುತ್ತದೆ. ಮೆದುಳು ತಾಜಾ ಸಂಗರಿಗಳನ್ನೆಲ್ಲಾ ವಿಂಗಡಿಸಿ, ಕೆಲಸಕ್ಕೆ ಬರುವ ವಿಷಯಗಳನ್ನು ಮಾತ್ರ ಸಿದ್ದಪಡಿಸುತ್ತದೆ. ಜೀರ್ಣವ್ಯವಸ್ಥೆಯನ್ನು ಸಕ್ರಮಗೊಳಿಸುವುದು ನಿದ್ರೆಯಲ್ಲಿರುವಾಗಲೇ ಶರೀರದಲ್ಲಿ ಪ್ರೋಟಿನ್‌ಗಳ ಹೆಚ್ಚುವರಿ ಉತ್ಪತ್ತಿ ಆಗುತ್ತದೆ. ರೋಗಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಆ ಮೂಲಕವೇ ಸಿಗುತ್ತದೆ.

ನಿದ್ರೆಯಲ್ಲಿ ಎರಡು ಹಂತ. ಮೊದಲನೆಯದು ಕಣ್ಣುಗುಡ್ಡೆಯ ಚಲನೆ ಕಡಿಮೆ ಇರುವಂತಹ ಹಂತ. ಎರಡನೆಯದು ಚಲನೆ ಹೆಚ್ಚು ಇರುವಂತಹ ಹಂತ. ಮೂರನೆಯದು ಗಾಢ ನಿದ್ರೆ, ಕನಸುಗಳನ್ನು ಈ ಹಂತದಲ್ಲಿಯೇ ಅನುಭವಿಸುವುದು. ನಿದ್ರೆಯಲ್ಲಿ ನಡೆಯುವ ಅಭ್ಯಾಸ ಇರುವಂತಹವರು ಈ ಹಂತದಲ್ಲೇ ಕಾರ್ಯಮಗ್ನರಾಗುವುದುಂಟು.

ಕೆಲವರಿಗೆ ಕೂಗಾಡುವ ಅಭ್ಯಾಸವೂ ಇರುತ್ತದೆ. ನಾಲ್ಕನೆಯದೇ ಅತಿ ಗಾಢ ನಿದ್ರೆ, ಪ್ರತಿ ಎಂಟು ಗಂಟೆಗಳ ಸಮಯದಲ್ಲಿ ಈ ರೀತಿಯ ನಿದ್ರಾವಸ್ಥೆ ಕಾರ್ಯ ನಿರ್ವಹಿಸುವುದು.

ಇನ್ಸೊಮ್ನಿಯಾ (ನಿದೆ ಬರದಿರುವುದು) ಹೈಪರ್ ಸೋಮ್ನಿಯಾ ( ಅತಿಯಾದ ನಿದ್ರೆ) ಸ್ಲೀಪ್ ಟೆರರ್ (ನಿದ್ರೆಯಲ್ಲಿ ಬೆಚ್ಚಿ ಬೀಳುವುದು) ಈ ರೀತಿ ನಿದ್ರೆಯೊಂದಿಗೆ ಹಲವು ಸಮಸ್ಯಗಿರುತ್ತವೆ. ಇದರಲ್ಲಿ ಬಹುಮಟ್ಟಿಗೆ ಮಾನಸಿಕ ತೊಂದರೆಯೂ ಇರುತ್ತದೆ. ನಿದ್ರಾಹೀನತೆಯು ಮನುಷ್ಯರನ್ನು ನೇರವಾಗಿ ಸಾಯಿಸುವುದಿಲ್ಲ. ಆದರೆ ಹೃದಯ, ಮೆದುಳು ಇತ್ಯಾದಿ ವ್ಯವಸ್ಥೆಗಳಿಗೆ ಸುಪಾರಿ ಕೊಟ್ಟು ಆರೋಗ್ಯದ ಮೇಲೆ ದಾಳಿ ಮಾಡುತ್ತದೆ. ಫ್ಯಾಟಲ್ ಫೆಮಿಲಿಯರ್ ಇನ್ಸೊಮ್ನಿಯಾ…..ದೀರ್ಗಕಾಲಿಕ ನಿದ್ರಾಹೀನತೆಯ ಕಾಯಿಲೆ. ಈ ತೊಂದರೆ ಇರುವಂತಹವರಿಗೆ ತಿಂಗಳುಗಟ್ಟಲೆ ನಿದ್ರೆ ಬರುವುದಿಲ್ಲ. ಚಿಕಿತ್ಸೆಯನ್ನು ಪಡೆಯದಿದ್ದರೆ ಒಂದೆರಡು ವರ್ಷದೊಳಗೆ ಸಾವಿಗೆ ಹತ್ತಿರವಾಗಬಹುದು.

ರಾತ್ರಿಯೇ ಪರಿಹಾರ

ಹಗಲಿಡೀ ಕೆಲಸ ಮಾಡುವುದು, ರಾತ್ರಿ ನಿದ್ರೆಗೆ ಶರಣಾಗುವುದು. ಇದು ಪ್ರಕೃತಿ ನಿಯಮ. ಪಶುಪಕ್ಷಾದಿಗಳು ಕೂಡ ಬೆಳಗಾಗುತ್ತಿದ್ದಂತೆ ಆಹಾರ ಶೇಖರಣೆಗೆ ಹೊರ ಹೋಗುತ್ತದೆ. ರಾತ್ರಿಯ ಹೊತ್ತಿಗೆ ಮತ್ತೆಡೆ ಗೂಡಿಗೆ ಸೇರಿಕೊಳ್ಳುತ್ತವೆ. ರಾತ್ರಿಗೆ, ನಿದ್ರೆಗೂ ನೇರವಾದ ಸಂಬಂಧವಿದೆ. ರಾತ್ರಿಯಾಗುತ್ತಿದ್ದಂತೆ ಪ್ರಕೃತಿಯು ಮನುಷ್ಯನ ನಿದ್ರೆಗೆ ಸಕಲ ಏರ್ಪಾಡನ್ನು ಮಾಡುತ್ತದೆ. ಏಯಿರ್ ಕಂಡೀಷನರ್ ಆನ್ ಮಾಡದಂತೆ ತಣ್ಣನೆಯ ಗಾಳಿಯನ್ನೀಯುತ್ತದೆ. ಕಣ್ಣಿನ ಮೇಲೆ ಬೆಳಕು ಬೀಳದಂತೆ…. ಚಂದ್ರನೆಂಬ ಬೆಡ್‌ಲ್ಯಾಂಪನ್ನು ಬೆಳಗಿಸುವುದು. ಷ್…..ಎಂದು ಎಚ್ಚರಿಸಿದಂತೆ ಸುತ್ತಲೂ ನಿಶ್ಯಬ್ದ.

ನಿದ್ರೆಯನ್ನು ಪ್ರೇರೇಪಿಸುವ ಮೆಲಟೊನಿನ್ ಹಾರ್ಮೋನು ರಾತ್ರಿ ವೇಳೆಯೇ ಉತ್ಪತ್ತಿಯಾಗುತ್ತದೆ. ಅದರಿಂದಾಗಿಯೇ ರಾತ್ರಿ ನಿದ್ರೆ ಅಷ್ಟೊಂದು ಗಾಢವಾಗಿರುತ್ತದೆ. ಹಗಲು ಕೆಲಸ, ರಾತ್ರಿ ನಿದ್ರೆ ಎಂಬುದು ಅನಾದಿಯಿಂದಲೂ ರೂಢಿಯಲ್ಲಿರುವ ಕ್ರಮ.

ಟೆಕ್ನಾಲಜಿಯ ಹಿಂದೆ ಓಟ ಸಾಗುತ್ತಿರುವ ಹಿನ್ನೆಲೆಯಲ್ಲಿ …. ನಿಧಾನವಾಗಿ ದಾರಿ ತಪ್ಪದನು. ಆನ್‌ಲೈನ್ ಚಟುವಟಿಕೆ, ಮೊಬೈಲ್ ಮಾತುಕತೆ, ಬ್ಲಾಗಿಂಗ್…..ಇದೆಲ್ಲದಕ್ಕೂ ದಾರಿ ತಪ್ಪಿದನು. ಆನ್‌ಲೈನ್ ಚಟುವಟಿಕೆ, ಮೊಬೈಲ್ ಮಾತುಕತೆ, ಬ್ಲಾಗಿಂಗ್…. ಇದೆಲ್ಲದಕ್ಕೂ ರಾತ್ರಿ ಹೊತ್ತೇ ಬೇಕಾಯಿತು. ಮಿಡ್ನೈಟ್ ಬಿರ್‍ಯಾನಿ, ಮಿಡ್‌ನೈಟ್ ಶಾಂಪಿಂಗ್, ಮಿಡ್‌ನೈಟ್ ಮೂವೀಸ್… ಮನರಂಜನೆಗೂ ರಾತ್ರಿಯೇ ಹಿತವೆನಿಸಿತು. ಕೆಲಸದ ಒತ್ತಡದಿಂದಾಗಿ ಉದ್ದೇಶಪೂರ್ವಕವಾಗಿಯೇ ಹಗಲಲ್ಲಿ ಮುಂದೂಡಿದ ಕೆಲಸಗಳನ್ನು ರಾತ್ರಿಯಲ್ಲಿ ಮಾಡುವುದು ರೂಢಿಗೆ ಬಂತು. ಅರ್ಧರಾತ್ರಿಯ ನಂತರವೇ ಹಾಸಿಗೆಯಲ್ಲಿ ಕಾಲು ಚಾಚುತ್ತಾನೆ. ಅತಿ ಹೆಚ್ಚು ಅಂದರೆ ಮೂರ್‍ನಾಲ್ಕು ಗಂಟೆಗಳಷ್ಟೇ ನಿದ್ರೆ, ಅದೂ ಅರೆಬರೆ. ಅಲಾರಂ ಶಬ್ದ ಕೇಳಿಸಿದಾಕ್ಷಣ ತಟ್ಟನೆ ಮೇಲೇಳುತ್ತಾನೆ. ಮತ್ತೆ ಗಡಿಬಿಡಿ, ಅದೇ ಅವಸರ ನಿದ್ರೆಯಲ್ಲಿ ಇಲ್ಲದ ಕ್ರಮಬದ್ದತೆ ಜೀವನದಲ್ಲಿ ಮಾತ್ರ ಬಂದೀತೆ?

ನಿದ್ರಾ ರಾಕ್ಷಸರು

ನಿದ್ರೆಗೆ ಪರ್ಯಾಯವಿಲ್ಲ. ನಿದ್ರೆ ಮಾಡಬೇಕಾದ ಸಮಯವನ್ನು ವ್ಯರ್ಥ ಮಾಡಬಾರದು. ನಿದ್ರೆಯನ್ನು ಅಧಿಗಮಿಸಲು ಅಡ್ಡದಾರಿಗಳಿಲ್ಲ. ನಿದ್ರೆಯೆಂಬುದು ವಿಲಾಸವೋ ಸುಖವೋ ಅಲ್ಲ. ಅಗತ್ಯ, ಅತ್ಯಗತ್ಯ. ನಿದ್ರೆಗೆ ಮೀಸಲಾಗುವ ಸಮಯವನ್ನು ನಿದ್ರೆಗೇ ಬಿಟ್ಟುಬಿಡಬೇಕು. ಅದಕ್ಕೆ ವೃತ್ತಿ ಸಂಬಂಧಿ ವ್ಯಸನಗಳು, ಪಾರ್ಟಿ, ಖುಷಿಗಳ ದಾಳಿ ಆಗಬಾರದು.

ನಿದ್ರಾಹೀನತೆಯಿಂದ ಮೊದಲಿಗೆ ರೋಗ ನಿರೋಧಕ ವ್ಯವಸ್ಥೆ ಹಾಳಾಗುವುದು…. ಇನ್ನೇನಿದೆ ಶತ್ರು ನಮ್ಮ ಮೇಲೆ ಅರ್ಧದಷ್ಟು ಜಯ ಸಾಧಿಸಿದಂತೆಯೇ ಲೆಕ್ಕ. ಉಳಿದ ಕ್ಯಾನ್ಸರ್ ಪೀಡಿತರೊಂದಿಗೆ ಹೋಲಿಸಿದರೆ ನಿದ್ರಾಹೀನತೆಯಿಂದ ಬಳಲುತ್ತಿರುವವರಲ್ಲಿ ವ್ಯಾಧಿಯು ಇನ್ನಷ್ಟು ವೇಗವಾಗಿ ವಿಸ್ತರಿಸುತ್ತದೆ ಎಂದು ಹೇಳಲಾಗಿದೆ. ನಿದ್ರೆಯೊಂದಿಗಿನ ಬೇರ್ಪಡಿಸಲಾಗದ ಮೆಲಟೋನಿನ್ ಹಾರ್ಮೋನ್‌ನ ಕೊರತೆಯು ಎದೆ, ಪ್ರೊಸ್ಟೇಟ್ ಕ್ಯಾನ್ಸರ್‌ಗೆ ದಾರಿ ಮಾಡಿಕೊಡುತ್ತದೆ.

ದೀರ್ಘಕಾಲಿಕ ನಿದ್ರಾಹೀನತೆಯಿಂದ ಹೃದಯಾಘಾತ, ಮಧುಮೇಹ, ಪಾರ್ಶ್ವವಾಯು, ಬೊಜ್ಜು ಇತ್ಯಾದಿ ಸಮಸ್ಯೆಗಳುಂಟಾಗುತ್ತವೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಆರೋಗ್ಯಕ್ಕೆ ಪೋಷಕಾಂಶಗಳ ಅಗತ್ಯತೆ ಎಷ್ಟಿದೆಯೋ ನಿದ್ರೆಯು ಅಷ್ಟೇ ಅವಶ್ಯಕ. ಧೂಮಪಾನದ ಪ್ರಮಾದಕ್ಕಿಂತಲೂ ನಿದ್ರಾಹೀನತೆಯ ಪ್ರಮಾದವೇ ಹೆಚ್ಚಿನದು. ಹೃದಯಾಘಾತಕ್ಕೆ ಬಲಿಯಾದವರಲ್ಲಿ ನಿದ್ರಾಹೀನತೆಯಿಂದ ಬಳಲುತ್ತಿರುವವರ ಸಂಖ್ಯೆಯೂ ಗಮನಾರ್ಹವಾಗಿ ಎಂದು ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ. ಹೃದಯ ಆರೋಗ್ಯಕರವಾಗಿ ಇರಬೇಕೆಂದರೆ ಕಣ್ತುಂಬ ನಿದ್ರೆಯೂ ಅತ್ಯವಶ್ಯಕ. ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವ ವಾಹನ ಚಾಲಕರಲ್ಲಿ ಶೇ.೩೪ ಮಂದಿ ನಿದ್ರಾಹೀನತೆಗೊಳಗಾಗಿರುವಂತಹರೆಂಬುದು ದೃಢಪಟ್ಟಿದೆ.

ನಾವು ಗಾಢವಾಗಿ ನಿದ್ರೆಯಲ್ಲಿದ್ದಾಗ ಹಸಿವನ್ನು ಹೆಚ್ಚಿಸುವ ಘ್ರೆಲಿನ್ ಎಂಬ ಹಾರ್ಮೋನ್ ಹುಟ್ಟತ್ತದೆ. ಆದುದರಿಂದ ನಿದ್ರೆಯಿಂದ ಎದ್ದ ನಂತರ ಹಸಿವು ಉಂಟಾಗುತ್ತದೆ. ಹೆಚ್ಚು ತಿನ್ನುವುದರಿಂದ ಮಾತ್ರವಲ್ಲ, ಕಡಿಮೆ ತಿನ್ನುವುದು ಕೂಡ ಬೊಜ್ಜಿಗೆ ಕಾರಣ ಆಗುತ್ತದೆ. ಶರೀರಕ್ಕೆ ಅಭದ್ರತೆ ಹೆಚ್ಚಿ ಕೊಬ್ಬಿನ ರೂಪದಲ್ಲಿ ಶಕ್ತಿಯನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತದೆ. ನಿದ್ರಾಹೀನತೆಯು ಮನೋಸ್ಥೈರ್ಯವನ್ನು ಅಧೀರಗೊಳಿಸುತ್ತದೆ. ಕುರುಕಲು ತಿಂಡಿಯಿಂದಲೇ ಹೊಟ್ಟೆ ತುಂಬಿಸಿ ಕೊಳ್ಳುವುದು ಹೆಚ್ಚುತ್ತದೆ. ಇದರಿಂದ ಬೊಜ್ಜು ಹೆಚ್ಚಲು ಸಹಕಾರಿಯಾಗುವುದು.

ನಿದ್ರಾಹೀನತೆಯು ಅಲ್ಜೀಮರ್ಸ್‌ಗೆ ಕಾರಣವಾಗಬಹುದು. ನಿದ್ರಾಹೀನತೆಯಿಂದಾಗುವ ಸಮಸ್ಯೆಗಳ ಪಟ್ಟಿ ದೊಡ್ಡದಿದೆ. ದಿನಾಲು ಒಂದು ಗಂಟೆ ನಿದ್ರೆ ಕಡಿಮೆಯಾದರೂ ದೀರ್ಘಾವಧಿಯಲ್ಲಿ ಮಾನಸಿಕ ಸಮಸ್ಯೆಗಳು ಕಾಡುತ್ತವೆ. ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆಂದರೆ ಶಕ್ತಿಯೂ ಲೋಪಿಸುತ್ತದೆ. ಸ್ಥಿರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗುತ್ತಾರೆ. ಸಣ್ಣಪುಟ್ಟ ವಿಷಯಗಳಿಗೂ ಸಿಡಿಮಿಡಿಗೊಳ್ಳುತ್ತಾರೆ.

ನಿದ್ರೆ ಮಾಡುವ ಸಮಯವನ್ನು ಉಪಯೋಗಿಸಿಕೊಂಡಿಲ್ಲವೆಂದರೆ ಕಚೇರಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲೇ ತೂಕಡಿಸುವ ಕ್ರಿಯೆ ಆರಂಭವಾಗಬಹುದು. ಮುಖ್ಯವಾದ ಕಾರ್ಯಕ್ರಮಗಳಲ್ಲೇ ನಿದ್ರೆಗೆ ವಾಲುತ್ತಾರೆ. ಇದರಿಂದ ಸಾರ್ವಜನಿಕವಾಗಿ ಸದಭಿಪ್ರಾಯಕ್ಕೆ ಹೊಡೆತ ಬೀಳುತ್ತದೆ. ಕುಟುಂಬದಲ್ಲೂ ಈ ಚಾಳಿಯೂ ಕಿರಿಕಿರಿಗೆ ಕಾರಣವಾಗಬಹುದು. ಸರಿಯಾದ ಸಮಯವನ್ನು ಕೊಡಲಾಗದೆ ಇರುವುದು ಗಂಡ-ಹೆಂಡಿರ ಮಧ್ಯೆ ಜಗಳಕ್ಕೆ ಕಾರಣವಾಗುತ್ತದೆ. ಸ್ನೇಹಿತರೊಂದಿಗೆ ಸಲುಗೆಯೂ ಇಲ್ಲವಾಗುತ್ತದೆ. ಚುರುಕಿನ ಸಾಮಾಜಿಕ ಜೀವನಕ್ಕೂ ಅಡ್ಡಗೋಡೆ ಹಾಕಿದಂತಾಗುವುದು. ಒಂದೇ ಮಾತಿನಲ್ಲಿ ಹೇಳುವುದಾದರೆ ನಿದ್ರಾಹೀನತೆಯ ತೊಂದರೆಗೊಳಗಾಗಿರುವವರು ಸಮಾನ ಎನ್ನಬಹುದು. ಇಬ್ಬರದು ಒಂದೇ ಮನಸ್ಥಿತಿ.

ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನ್‌ಗಳನ್ನು ನಿದ್ರೆ ತಡೆಯೊಡ್ಡುತ್ತದೆ. ಇದರಿಂದ ಮನಸ್ಸಿಗೆ ಹಾಯೆನಿಸುವುದು. ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಏಳರಿಂದ ಎಂಟುಗಂಟೆಯ ನಿದ್ರೆಯ ಉಳಿದ ಹದಿನಾರು ಗಂಟೆಗಳಲ್ಲಿ ಪ್ರತಿಯೊಂದು ನಿಮಿಷವನ್ನು ಅರ್ಥವತ್ತಾಗಿ ಕಳೆಯಲು ಸಹಕಾರಿಯಾಗುತ್ತದೆ. ಸಂತೃಪ್ತ ನಿದ್ರೆಯಿಂದ ಕಣ್ಣುಗಳಲ್ಲಿ ಕಾಂತಿ, ಚರ್ಮದಲ್ಲಿ ಹೊಳಪು, ಮುಖದಲ್ಲಿ ಪ್ರಶಾಂತತೆ…. ಒಟ್ಟಾರೆಯಾಗಿ ದೇಹಕ್ಕೆ ಹೊಸ ಶಕ್ತಿ ತುಂಬಿಕೊಂಡತಾಗಿರಯತ್ತದೆ.

ವಯಸ್ಸಿಗನುಗುಣವಾಗಿ ನಿದ್ರೆಯ ಲೆಕ್ಕ ಬದಲಾಗುತ್ತದೆ. ಮೂರರಿಂದ ವರ್ಷದೊಳಗಿನ ಶಿಶುಗಳಿಗೆ ಹನ್ನೆರಡು ಗಂಟೆಗೂ ಹೆಚ್ಚು ನಿದ್ರೆಯ ಅವಶ್ಯಕತೆ ಇರುತ್ತದೆ. ವರ್ಷದಿಂದ ಐದು ವರ್ಷಗಳವರೆಗೆ ಕನಿಷ್ಠ ಹತ್ತುಗಂಟೆ ನಿದ್ರೆ ಬೇಕಾಗುತ್ತದೆ. ಹದಿಮೂರು ವರ್ಷದೊಳಗಿನ ಮಕ್ಕಳಿಗೆ ಹತ್ತು ಗಂಟೆಯ ನಿದ್ರೆ ಬೇಕಾಗುವುದು. ತಾರುಣ್ಯದಲ್ಲಿ ಒಂಬತ್ತು ಗಂಟೆಯ ನಿದ್ರೆ ಅತ್ಯವಶ್ಯಕ. ಆ ನಂತರ ಕನಿಷ್ಠ ಏಳರಿಂದ ಎಂಟುಗಂಟೆಗಳ ಅವಧಿಯನ್ನು ನಿದ್ರೆಗೆ ಮೀಸಲಿಡಬೇಕು.

ಮಧ್ಯಾಹ್ನ ಯಾವ ಆಹಾರವನ್ನೇ ತಿಂದಿರಲಿ, ರಾತ್ರಿ ಹೊತ್ತು ಮಾತ್ರ ಸುಖ ನಿದ್ರೆ ಕೊಡುವ ಆಹಾರವನ್ನೇ ತಿನ್ನಬೇಕು. ಮುಖ್ಯವಾಗಿ ಆಹಾರದಲ್ಲಿರುವ ಕ್ಯಾಲ್ಸಿಯಂ ಎಲುಬುಗಳನ್ನು ಬಲವಾಗಿರಿಸುವುದಷ್ಟೇ ಅಲ್ಲದೆ, ಗಾಢವಾದ ನಿದ್ರೆಗೂ ಕಾರಣವಾಗುತ್ತದೆ. ನಿದ್ರೆಗೆ ಒಂದೆರೆಡು ಗಂಟೆಗಳ ಮುನ್ನ ಕಾಫೀ ಟೀಗಳನ್ನು ಕುಡಿಯಬಾರದು. ಮಿಠಾಯಿಗಳನ್ನು ತಿನ್ನಬಾರದು. ದಿನಾಲೂ ಒಂದೇ ಸಮಯಕ್ಕೆ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಬಹಳಷ್ಟು ಮಂದಿ ಮಂಚಕ್ಕೆ ಎದುರಾಗಿ ಗೋಡೆಗೆ ಗಡಿಯಾರವನ್ನು ಹಾಕಿರುತ್ತಾರೆ ಇದರಿಂದ ಬೇಗ ಮಲಗುವುದು, ಇಲ್ಲವೇ ಬೇಗನೇ ಏಳುವುದು ಎಂಬ ಒತ್ತಡಕ್ಕೆ ಕಾರಣವಾಗುವುದಷ್ಟೆ. ಮಲಗುವ ಕೋಣೆಯಲ್ಲಿ ಟೀವಿ ಇರದಿರುವುದು ಒಳ್ಳೆಯದು. ಫೋನ್‌ಗಳ ರಿಂಗಣವೂ ಇಲ್ಲದಿದ್ದರೆ ಉತ್ತಮ. ತುಂಬಾ ಆತ್ಮೀಯರೆನ್ನುವವರೊಂದಿಗೆ ಸ್ವಲ್ಪ ಹೊತ್ತು ಕಾಲಕ್ಷೇಪ ಮಾಡಬಹುದು. ಇದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುವುದು. ಉಗುರು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ ಮಲಗಿದರೂ ಹಾಯಾದ ನಿದ್ರೆ ಬರುತ್ತದೆ. ಒಳ್ಳೆಯ ಸಂಗೀತ, ಉತ್ತಮ ಸಾಹಿತ್ಯ ನಿದ್ರಾನಗರಿಯ ರಾಜಮಾರ್ಗಗಳು. ಒಂದಷ್ಟು ಕಾಲ ಧ್ಯಾನ ಮಾಡಿದರೂ ಪರವಾಗಿಲ್ಲ. ನಿದ್ರೆಗೆ ವ್ಯಾಯಾಮದಿಂದಲೂ ಸಂಬಂಧ ವಿದೆ. ದಿನಾಲೂ ಅರ್ಧಗಂಟೆಗೂ ಎಚ್ಚು ಕಾಲ ಕಸರತ್ತು ಮಾಡಿದರೆ ನಿದ್ರೆಗೆ ಸಹಕಾರಿಯಾಗುತ್ತದೆ. ಆದ್ದರಿಂದಲೇ ಇಟಾಲಿಯನ್‌ರು ಬೆಡ್ ಈಡ್ ಎ ಮೆಡಿಸಿನ್ ಎಮದಿದ್ದಾರೆ.

ಮಲಗುವ ಕೋಣೆಗೆ ಹೋಗುವ ಮುನ್ನ ಚಿಂತೆ, ಬೇಸರ, ಒತ್ತಡ, ಭಯ, ಅಭದ್ರತೆ-ಎಲ್ಲವನ್ನೂ ಮೂಟೆ ಕಟ್ಟಿ ಕೋಣೆ ಹೊರಗೇ ಬಿಟ್ಟು ಬರಬೇಕು. ಈ ಕೋಣೆ `ವಾರ್ ರೂಂ’ ಅಲ್ಲ-ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಅದೇನು ಬೋರ್ಡ್ ರೂಂ ಅಲ್ಲ, ಮೇಧೋ ಮಂಥನಮಾಡಲು, ಕಳೆದಿದ್ದನ್ನು ನೆನಪಿಸಿಕೊಂಡು ಪಶ್ಚಾತ್ತಾಪ ಪಡುವುದಕ್ಕೆ. ಈ ವ್ಯವಹಾರಕ್ಕೆಲ್ಲಾ ಹಗಲಿನ ಹನ್ನೆರಡು ಗಂಟೆಯ ಸಮಯವಿದೆ.

Be the first to comment on "ರಾತ್ರಿ ಮಾತ್ರ ನಿಮ್ಮದೇ…. ನಿದ್ರೆಯದೇ ಸರ್ವಾಧಿಕಾರ!!"

Leave a comment

Your email address will not be published.


*