ಶಾಮನೂರಿನ ಜಾತ್ರೆ, ಹಬ್ಬಗಳ ಹಿರಿಮೆ

Share

‘ಶಾಮನೂರು’, ಸುತ್ತಮುತ್ತೆಲ್ಲ ಹೆಸರುವಾಸಿಯಾದ ಊರು. ಲಕ್ಷ್ಮಿ ಸರಸ್ವತಿಯರ ತವರು. ಐತಿಹಾಸಿಕ,ಧಾರ್ಮಿಕ,ಆಧ್ಯಾತ್ಮಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಭಾವೈಕ್ಯತೆಗೆ ಹೆಸರಾದುದು.ದಾವಣಗೆರೆ ಜಿಲ್ಲೆಯಲ್ಲಿ ಹಿರಿಯ ಮಗಳಾದ ಶಾಮನೂರು ತನ್ನದೇ ಆದ ವಿಶಿಷ್ಟ ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿದ್ದು, ಅದರ ಹಿರಿಮೆ ಗರಿಮೆಗಳ ಕುಡಿಚಾಚಿ, ಆಕಾಶದೆತ್ತರಕ್ಕೆ, ಭೂಮಿಯುದ್ಧಗಲಕ್ಕೆ ಬೆಳೆಯುತ್ತಿವೆ.

ಶಾಮನೂರಿನಲ್ಲಿ ಆಚರಿಸುತ್ತಿರುವ ಹತ್ತಾರು ಹಬ್ಬಗಳಲ್ಲಿ ಕೆಲವೊಂದರ ಪರಿಚಯ ಇಲ್ಲಿದೆ.

ಶ್ರೀ ಆಂಜನೇಯಸ್ವಾಮಿ ಜಾತ್ರೆ

ಊರಿನ ಆರಾಧ್ಯದೇವತೆ, ಉತ್ಸವಮೂರ್ತಿಯ ರೂಪದಲ್ಲಿ ಊರಲ್ಲಿ ಸಂಚರಿಸುವ ಒಂದು ಸಂಪ್ರದಾಯ. ಅಂತೆಯೇ ವೃದ್ಧರಿಗೆ, ಚಿಕ್ಕಮಕ್ಕಳಿಗೆ ಅನಾರೋಗ್ಯವಂತರಿಗೆ, ಅಶಕ್ತರಿಗೆ,ವೇಳೆಯ ಅಭಾವವಿರುವವರಿಗೆ, ಪ್ರವೇಶ ನಿಷಿದ್ದವಿದ್ದವರಿಗೆ, ದೇವರ ದರ್ಶನಕ್ಕೆ ದೇವಾಲಯಕ್ಕೆ ಹೋಗಲಾಗದವರಿಗೆ, ವರ್ಷಕ್ಕೊಮ್ಮೆಯಾದರೂ ದೇವರು ಊರೊಳಗೆ ಸಂಚರಿಸುವುದರ ಮೂಲಕ ದರ್ಶನ ಕೊಡುವುದರ ಸಲುವಾಗಿ ರಥೋತ್ಸವ ನಡೆಸುವ ಸಂಪ್ರದಾಯ ನಮ್ಮ ಸಂಸ್ಕೃತಿಯಲ್ಲಿ ಬಳಕೆಯಲ್ಲಿದೆ. ಕದಂಬರ,ವಿಜಯನಗರದರಸರ ಕಾಲದಲ್ಲಿನ ಕಲ್ಲಿನ ರಥಗಳು ಇದ್ದು ಮೈಸೂರು ಒಡೆಯರ ಕಾಲದಲ್ಲಿ ರಥೋತ್ಸವ ಪದ್ಧತಿ ರೂಢಿಗೆ ಬಂದಿರಬಹುದು ಎಂಬ ವದಂತಿ.

ನಮ್ಮ ಶಾಮನೂರಿನಲ್ಲಿಯೂ ರಥೋತ್ಸವ ಜಾತ್ರೆ ವರ್ಷಾನುವರ್ಷಗಳಿಂದ ನಡೆದುಬರುತ್ತಿದೆ. ಶಿವರಾತ್ರಿಯಾದ ಹತ್ತುದಿನಕ್ಕೆ, ದಶಮಿಯಿಂದು ರಥೋತ್ಸವ, ತೇರಿನ ಗಾಲಿಗಳು ೫ ಅಡಿ ಎತ್ತರವಿದ್ದು, ಅವಕ್ಕೆ ಜೋಡಿಸಿರುವ ಚಿಕ್ಕ ದೇವಾಲಯದಂತಿರುವ ಗಡ್ಡೆಯಲ್ಲಿ ಚಿತ್ರಪತ್ರಿಕೆಗಳು ಶೌರ್ಯದ ಸಂಕೇತವಾಗಿ ಆನೆ,ಸಿಂಹಗಳ ಚಿತ್ರಗಳು ಶೃಂಗಾರ ಚಿತ್ರಗಳಿವೆ. ಮರದ ಕೊರಡಿನಿಂದ ರಥ ರಚಿತವಾಗಿದೆ.

ಒಂದನೇ ಅಂಕಣ ೮ ಅಡಿ,ಎರಡನೇ ಅಂಕಣ ೩ ಅಡಿ, ಮೂರನೇ ಅಂಕಣ ೬ ಅಡಿ, ನಾಲ್ಕನೇ ಅಂಕಣ ೪ ಅಡಿ, ಐದನೇ ಅಂಕಣ ೩ ಅಡಿ, ಅಂಕಣಗಳ ಮೇಲೆ ಡೂಂಉ ಕಳಸ ಸೇರಿ ೬ ಅಡಿ ತೇರನ್ನು ಒಟ್ಟು ೩೦ ಅಡಿಗಳಷ್ಟು ಎತ್ತರ ಅಲಂಕರಿಸಿದರೆ, ನೆಲದಿಂದ ತೇರಿನ ೧೦ ಅಡಿ ಸೇರಿ ೪೦ ಅಡಿಯಾಗುತ್ತದೆ. ಒಂದನೇ ಅಂಕಣದಲ್ಲಿ ಉತ್ಸವಮೂರ್ತಿ ಸ್ಥಾಪಿಸಲಾಗುವ ಗರ್ಭಗುಡಿ, ಇದಕ್ಕೆ ಹಿತ್ತಾಳೆಯ ಚಿತ್ರಫಲಕಗಳ ಜೋಡಿಸಿರುತ್ತಾರೆ. ಗೋಪುರ ಗೋಲಾಕಾರವಾಗಿದ್ದು ವಿವಿಧ ವರ್ಣದ ಪತಾಕೆಗಳಿಂದ ಅಲಂಕರಿಸಲಾಗಿರುತ್ತದೆ. ಇಂತಹ ಅಲಂಕೃತ ರಥದ ಉತ್ಸವ ಸಡಗರ ಸಂಭ್ರಮದಿಂದ ೫ದಿನ ನಡೆಯುತ್ತದೆ.

ಮೊದಲದಿನ ಸ್ವಾಮಿಗೆ ಪೂಜೆ ಸಲ್ಲಿಸಿ, ಕಂಕಣಧಾರಣೆ ಮಾಡಿ, ಕಂಕಣ ಕಟ್ಟಿಕೊಂಡು ಜಿಂಕೆ ಉತ್ಸವ ಮಾಡುತ್ತಾರೆ. ೨ನೇ ದಿನ ಕುದುರೆ ಉತ್ಸವ ಮಾಡಿ, ಅಂದು ರಾತ್ರಿ ಸಹೋದರಿ ಗ್ರಾಮಗಳಾದ ನಿಟುವಳ್ಳಿ, ನಾಗನೂರು, ಶಿರಮಗೊಂಡನಹಳ್ಳಿಗಳಿಗೆ ಕಾಯಿ, ಹೊಂಬಾಳೆ ಕಳಿಸುವುದರ ಮೂಲಕ ಅಹ್ವಾನ ಕೊಡುತ್ತಾರೆ. ೩ನೇ ದಿನ ಬೆಳಿಗ್ಗೆ, ಸಿಂಹ ಉತ್ಸವ, ನಂತರ ಅನೆಯ ಉತ್ಸವ ಮಾಡುತ್ತಾರೆ. ‘ಹೋಮ’ ಮಾಡಿ, ಗಣೇಶನಿಗೆ, ರಾಮದೇವರಿಗೆ ಪೂಜೆ ಸಲ್ಲಿಸುತ್ತಾರೆ. ಸಹೋದರಿ ಗ್ರಾಮಗಳ ದೇವರುಗಳ ಶಾಸ್ತ್ರೋಕ್ತವಾಗಿ ಎದುರುಗೊಂಡು ಊರೊಳಗೆ ಕರೆ ತರುತ್ತಾರೆ. ಎಲ್ಲ ಊರ ದೇವರುಗಳ ಸಮ್ಮುಖದಲ್ಲಿ ಅಷ್ಟದಿಕ್ಕುಗಳಲ್ಲಿ ಅಷ್ಟದಿಕ್ಪಾಲಕರ ಪೂಜೆ ನಡೆಯುತ್ತದೆ. ರಥದಲ್ಲಿ ಶಾಮನೂರು ಆಂಜನೇಯಮೂರ್ತಿ,ನಾಗನೂರಿನ ಆಂಜನೇಯ ಮೂರ್ತಿಗಳ ಕೂರಿಸುತ್ತಾರೆ.

ಗೌಡ್ರಮನೆಯಿಂದ ರಥವನ್ನು ಪ್ರದಕ್ಷಿಣೆ ಹಾಕುತ್ತವೆ.ಕುಣಿಯುವ ಹನುಮಪ್ಪನ ಕುಣಿತ, ಡೊಳ್ಳು, ಡೋಲು, ನಗಾರಿ, ತಮ್ಮಟೆ, ಕಹಳೆ,ಓಲಗದ ಸದ್ದುಗದ್ದಲದಲ್ಲಿ ನೆರೆದಿರುವ ಸಾವಿರಾರು ಜನರ ಮಧ್ಯೆ ಝಗಮಗಿಸುವ ವಿದ್ಯುತ್ ಬೆಳಕಿನಲ್ಲಿ, ಸಡಗರ ಸಂಭ್ರಮದಿಂದ ಅಬಾಲಬವೃದ್ಧಿರಾಗಿಯಾಗಿ ರಥ ಎಳೆಯುತ್ತಾರೆ. ಭಕ್ತರು ರಥದ ಗಾಲಿಗೆ ಕಾಯಿ ಒಡೆಯುವ,ಗೋಲಾಕಾರದ ಗೋಪುರಕ್ಕೆ ಬಾಳೆಹಣ್ಣು, ಸೂರಬೆಲ್ಲ, ಮೆಣಸು ಉಗ್ಗಿ ಸಂತೃಪ್ತರಾಗುತ್ತಾರೆ. ರಥವನ್ನು ಬನ್ನಿಮರದವರೆಗೆ ಕರೆದೊಯ್ದು,ಬನ್ನಿಮರಕ್ಕೆ ಪೂಜೆ ಸಲ್ಲಿಸಿ, ಹಿಂದಿರುಗಿ ರಥವನ್ನು ಕರೆತರುತ್ತಾರೆ.

(ಸಾಧಾರ)

Be the first to comment on "ಶಾಮನೂರಿನ ಜಾತ್ರೆ, ಹಬ್ಬಗಳ ಹಿರಿಮೆ"

Leave a comment

Your email address will not be published.


*