ಸಜ್ಜನಿಕೆಯ ಮೇರು ಶಿಖರ ವೆಂಕಣ್ಣಾಚಾರ್

Share

ಪರಿಚಿತರನ್ನು ಇವರು ಅಪ್ಪಾಜಿ, ಗುರೂ, ದಣಿ ಎಂದು ಕರೆಯುವ ಮೂಲಕ ತಮ್ಮ ಸಭ್ಯ ನಡುವಳಿಕೆಗೆ ಪೀಠಿಕೆ ಹಾಕುತ್ತಾರೆ. ಯಾರನ್ನೂ, ಎಂತಹುದೇ ಸಂದರ್ಭದಲ್ಲಿಯೂ ಕಠಿಣವಾಗಿ ಮಾತನಾಡಿಸಿದ ಸಂದರ್ಭಗಳೇ ಇಲ್ಲವೆಂಬುದನ್ನು ಘಂಟಾಘೋಷವಾಗಿ ಹೇಳಬಹುದು. ಮೂಲತಃ ಶಿವಮೊಗ್ಗ ಜಿಲ್ಲೆಯಿಂದ ಬಂದವರಾದರೂ ಚಿತ್ರದುರ್ಗ ಜಿಲ್ಲೆಯ ಬಂಧನಕ್ಕೆ ಮನ ಸೋತಿದ್ದಾರೆ. ಶಿಕ್ಷಕ ವೃತ್ತಿಯನ್ನು ನಿಭಾಯಿಸಿ, ಕೆಲವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿಯೂ ಮನ್ನಣೆ ಪಡೆದು, ಆ ಇಲಾಖೆ ಚಟುವಟಿಕೆಗಳಿಗೆ ಜೀವ ತುಂಬಿರುವ ಮಹಾ ಸಂಘಜೀವಿಯೇ ಕೆ.ವೆಂಕಣ್ಣಾಚಾರ್.

ಪ್ರಸ್ತುತ ದುರ್ಗದಲ್ಲಿ ಇವರ ಹೆಸರು ಅತ್ಯಂತ ಚಿರಪರಿಚಿತ. ಶ್ರೀ ಸಾಮಾನ್ಯ , ವಿದ್ಯಾರ್ಥಿ, ಶಿಕ್ಷಕ, ಉಪನ್ಯಾಸಕ, ರಾಜಕಾರಣಿ, ಪತ್ರಕರ್ತ….ಹೀಗೆ ಎಲ್ಲಾ ಕ್ಷೇತ್ರದ ವಲಯದಲ್ಲಂತೂ ಇವರ ಪರಿಚಯ ಅತ್ಯಂತ ನಿಕಟವಾದುದಾಗಿದೆ. ಸಂಶೋಧನಾ ಕ್ಷೇತ್ರ, ಸಾಹಿತ್ಯ, ಸಾಮಾಜಿಕ ಚಟುವಟಿಕೆ, ಸರ್ಕಾರಿ ಕಾರ್ಯಕ್ರಮ, ಖಾಸಗಿ ಮಹತ್ವದ ಸಮಾರಂಭಗಳಿಗೆಲ್ಲಾ ಇವರ ನಿರೂಪಣೆ ಇದ್ದೇ ಇರಬೇಕು. ಆಚಾರ್ ಕೂಡ ಆ ಎಲ್ಲಾ ಕೈಂಕರ್ಯವನ್ನು ಪ್ರತಿಫಲಾಪೇಕ್ಷೆ ಇಲ್ಲದೇ ತಮ್ಮದೇ ಎಂಬ ತನ್ಮಯತೆಯಿಂದ ನಿರ್ವಹಿಸಿ ಕೊಡುತ್ತಿದ್ದುದ್ದರಿಂದಲೇ ಬಹುಮಂದಿಗೆ ಇವರ ಹಾಜರಾತಿ ಕಡ್ಡಾಯವಾಗಿ ಬೇಕಾಗುತ್ತಿತ್ತು.

ಇಂಗ್ಲೆಂಡಿನ ರಾಯಭಾರಿಯಾಗಿರಲಿ, ಸರ್ಕಾರಿ ಮತ್ತು ಖಾಸಗಿ ವಿವಿಐಪಿಗಳಿಗೆಲ್ಲಾ ಕೋಟೆ ದರ್ಶನಕ್ಕೆ ಇವರದೇ ಉಸ್ತುವಾರಿ. ಕೋಟೆ, ಪಾಳೇಗಾರರ ಆಳ್ವಿಕೆ, ಜಿಲ್ಲೆಯ ಇತಿಹಾಸವನ್ನು ಕರತಲಾಮಲಕ ಮಾಡಿಕೊಂಡಿರುವ ಆಚಾರ್ ಈ ಕುರಿತ ಅನೇಕ ಲೇಖನಗಳನ್ನು ರಾಜ್ಯದ ಪತ್ರಿಕೆಗಳಿಗೆ ಬರೆದಿದ್ದಾರಲ್ಲದೆ, ಈ ಸಂಬಂಧಿತ ಮಾಹಿತಿಯ ಪ್ರಕಟಣೆಗೂ ಕೈಜೋಡಿಸಿದ್ದಾರೆ. ನಾಡಿನ ಹಿರಿ-ಕಿರಿಯ ಸಾಹಿತಿಗಳ ಒಡನಾಟದ ಹವ್ಯಾಸವನ್ನು ಇಟ್ಟುಕೊಂಡಿರುವ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿಯಲ್ಲಿದ್ದಾಗ ಎಲೆಮರೆಯ ಕಲಾವಿದರ ಸಹಾಯಕ್ಕೆ ಸಾಕಷ್ಟು ಮುತುವರ್ಜಿ ವಹಿಸಿದ್ದರು. ಆಗಿನ್ನೂ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲೇ ಇದ್ದಾಗ ದಾವಣಗೆರೆಯ ನಂಟನ್ನೂ ನಿಕಟವಾಗಿಸಿಕೊಂಡ ಅವರು ಇಲ್ಲಿಯೂ ಸಹ ಸ್ಮರಣಾರ್ಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಿದರು.

ಲೆಕ್ಕಕ್ಕೆ ಸಿಗದಷ್ಟು ಕಾರ್ಯಕ್ರಮ, ಸನ್ಮಾನ ಸಮಾರಂಭಗಳಿಗೆ ‘ನಿರೂಪಣೆಯ ಜೀವ’ ತುಂಬುವ ಇವರು ಮಾತ್ರ ಸನ್ಮಾನ ಎಂದರೆ ಗಾವುದ ದೂರ ಇದ್ದು ಬಿಡುತ್ತಾರೆ. ಆದಾಗ್ಯೂ ಶ್ರೀ ಮುರುಘಾಮಠದ ಸನ್ಮಾನದ ಮುಲಾಜಿಗೆ ತಲೆಬಾಗಲೇಬೇಕಾಯಿತು. ಸನ್ಮಾನಕ್ಕಾಗಿ ದೊರೆತ ನಗದು ಹಣದ ಕವರ್ನ್ನು ಚೀಲದಲ್ಲಿರಿಸಿಕೊಂಡು ಮನೆಗೆ ಹಿಂತಿರುಗದ ಆಚಾರ್ ಆ ಮೊತ್ತಕ್ಕೆ ತಮ್ಮ ವೈಯಕ್ತಿಕ ದೇಣಿಗೆಯನ್ನೂ ಸೇರಿಸಿ ಶ್ರೀ ಮಠದ ಸಾರ್ವಜನಿಕ ಸೇವಾ ಕಾರ್ಯಕ್ಕೆ ಅದನ್ನು ವಿನಿಯೋಗಿಸುವಂತೆ ಹೇಳಿದ್ದುಂಟು.
ತಮ್ಮ ೬೨ನೇ ಹುಟ್ಟುಹಬ್ಬ ಮತ್ತು ಎರಡನೇ ಮಗನ ಮದುವೆ ಸಮಾರಂಭದ ನೆನಪಿಗಾಗಿ ತಾವೂ ಕೂಡಿಟ್ಟ ೬೨ ಸಾವಿರ ರೂ.ಗಳನ್ನು ಬಡ ಕಲಾವಿದರ ಸನ್ಮಾನಕ್ಕೆ ವಿನಿಯೋಗಿಸಿದ ಸಂದರ್ಭವನ್ನು ಮರೆಯಲಾಗದು. ದುರ್ಗದ ಲೈಬ್ರರಿಗೆ ನೂರಾರು ಗ್ರಂಥಗಳ ದಾನ, ಕಸಾಪಕ್ಕೆ ಹತ್ತು ಸಾವಿರ ದತ್ತಿ ಹಣ ನೀಡಿರುವುದೂ ಇವರ ಸೇವಾ ಚಟುವಟಿಕೆಗಳ ನೆನಪಿನಲ್ಲಿವೆ.
ದುರ್ಗದ ಜೆ.ಸಿ.ಆರ್.ಬಡಾವಣೆಯ ತಮ್ಮ ಮನೆಯ ಸನಿಹದಲ್ಲಿರುವ ಸರ್ಕಾರಿ ಶಾಲೆಯ ಬಡ ಮಕ್ಕಳು ಈ ತಾತನಿಂದ ನಿತ್ಯವೂ ಕುಡಿಯುವ ನೀರು, ಚಾಕ್ಲೆಟ್ನ್ನು ಪಡೆಯಲು ಮಿಸ್ ಮಾಡಿಕೊಳ್ಳುವುದಿಲ್ಲ. ಅವರಲ್ಲಿ ಬಹುತೇಕರಿಗೆ ಪಠ್ಯಪುಸ್ತಕ, ನೋಟ್ಬುಕ್ ಹಾಗೂ ಯೂನಿಫಾರಂ ಮತ್ತು ಬ್ಯಾಗ್ಗಳನ್ನು ಕೊಡಿಸುವಲ್ಲೂ ಆಚಾರ್ ಕಾಳಜಿ ವಹಿಸುತ್ತಾರೆ.

ಪುಸ್ತಕ ಸಂಗ್ರಹ ಮತ್ತು ಅಪಾರವಾದ ಓದುವಿಕೆಯನ್ನು ಇಷ್ಟಪಡುವ ವೆಂಕಣ್ಣಾಚಾರ್ ತನ್ನಲ್ಲಿಗೆ ಬರುವ ಯಾರನ್ನೂ ಜಾತಿ ಬಣ್ಣದಿಂದ ನೋಡದಂತಹ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದಾರೆ. ಇನ್ನೇನು ೭೫ ದಾಟಿದೆಯಾದರೂ ಇವರ ಉತ್ಸಾಹಕ್ಕೆ ಆ ವಯೋಮಾನ ಅಡ್ಡಿಯಾಗಿಯೇ ಇಲ್ಲ. ಚಿರಂತನ ಉತ್ಸಾಹದ ಚಿಲುಮೆಯ ಮತ್ತೊಂದು ರೂಪವೇ ವೆಂಕಣ್ಣಾಚಾರ್.

Be the first to comment on "ಸಜ್ಜನಿಕೆಯ ಮೇರು ಶಿಖರ ವೆಂಕಣ್ಣಾಚಾರ್"

Leave a comment

Your email address will not be published.


*