ಆಧಾರ್ ಜೋಡಣೆಗೆ ನೀಡಲಾಗಿದ್ದ ಗಡುವು ವಿಸ್ತರಣೆ

Share
  • 13
    Shares

ನವದೆಹಲಿ: ಸರ್ಕಾರದ ಕೆಲವು ಯೋಜನೆಗಳು, ಸೌಲಭ್ಯಗಳು, ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಿಮ್‌ಗೆ ಆಧಾರ್ ಜೋಡಣೆಗೆ ನೀಡಲಾಗಿದ್ದ ಮಾರ್ಚ್ 31ರ ಗಡುವನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಆಧಾರ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಂವಿಧಾನ ಪೀಠವು ವಿಚಾರಣೆ ನಡೆಸಿ ತೀರ್ಪು ನೀಡುವವರೆಗೆ ಗಡುವನ್ನು ಮುಂದಕ್ಕೆ ಹಾಕಲಾಗಿದೆ.
ಕಳೆದ ಡಿಸೆಂಬರ್ 31ರಂದು ನಡೆದ ವಿಚಾರಣೆಯಲ್ಲಿ ಆಧಾರ್ ಸಂಖ್ಯೆ ಜೋಡಣೆಗೆ ಮಾರ್ಚ್ 31ರ ಗಡುವು ನೀಡಲಾಗಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈಗ ಗಡುವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ.
ತತ್ಕಾಲ್ ಯೋಜನೆ ಅಡಿ ಪಾಸ್‌ಪೋರ್ಟ್ ಪಡೆಯಲು ಆಧಾರ್ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ತತ್ಕಾಲ್ ಪಾಸ್‌ಪೋರ್ಟ್‌ಗೂ ಆಧಾರ್‌ನಿಂದ ವಿನಾಯಿತಿ ನೀಡಬೇಕು ಎಂದು ಹಿರಿಯ ವಕೀಲರಾದ ಅರವಿಂದ ದಾತಾರ್ ಮತ್ತು ಶ್ಯಾಮ್ ದಿವಾನ್ ಕೋರಿದರು. ಈ ಮನವಿಯನ್ನು ಪೀಠ ಒಪ್ಪಿಕೊಂಡಿದೆ.
ಪಾಸ್‌ಪೋರ್ಟ್ ಪಡೆಯಲು ಇತರ ಗುರುತಿನ ದಾಖಲೆಗಳನ್ನು ನೀಡಿದರೆ ಸಾಕು. ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಕ್ಕಾಗಿ ಆಧಾರ್ ಮಾಹಿತಿ ಕೇಳಲಾಗುತ್ತಿದೆ ಎಂದು ಅಟಾರ್ನಿ ಜನರಲ್ ವೇಣುಗೋಪಾಲ್ ತಿಳಿಸಿದರು.
ಆಧಾರ್ ಯೋಜನೆಯಲ್ಲಿ ಇರುವ ಲೋಪಗಳೆಲ್ಲವನ್ನೂ ಸೂಕ್ತ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸರಿಪಡಿಸಬೇಕು ಎಂದು ಹಿಂದಿನ ವಿಚಾರಣೆ ವೇಳೆಯಲ್ಲಿ ಸಂವಿಧಾನ ಪೀಠವು ಹೇಳಿತ್ತು.

Be the first to comment on "ಆಧಾರ್ ಜೋಡಣೆಗೆ ನೀಡಲಾಗಿದ್ದ ಗಡುವು ವಿಸ್ತರಣೆ"

Leave a comment

Your email address will not be published.


*