ಚಿತ್ರದುರ್ಗಕ್ಕೊಬ್ಬರೆ ಬೋರಪ್ಪ

Share
  • 11
    Shares

ಚಿತ್ರದುರ್ಗ ಜಿಲ್ಲಾಕೇಂದ್ರದಲ್ಲಿ ಶೈಕ್ಷಣಿಕ ಕೇಂದ್ರಗಳನ್ನು ಆರಂಭಿಸುವುದೆಂದರೆ ಎರಡು ಪ್ರತಿಷ್ಠಿತ ಮಠಗಳವರಿಗೆ ಮಾತ್ರ ಎಂಬ ಪರಿಸ್ಥಿತಿ ಇದ್ದುದುಂಟು. ಇದು ಅರವತ್ತರ ದಶಕದ ಸಂಗತಿ. ಆದರೆ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬರು ತಾನೂ ವಿದ್ಯಾಕೇಂದ್ರ ಸ್ಥಾಪಿಸಬಾರದೇಕೆ ಎಂಬ ಸದಿಚ್ಛೆ ಹಾಗೂ ಉನ್ನತ ಗುರಿಯೆಂದ ಚಿಕ್ಕ ಪ್ರಮಾಣದಲ್ಲಿಯೇ ಶಾಲೆ ಆರಂಭಕ್ಕೆ ಶ್ರೀಕಾರ ಹಾಡಿದರು.
ಆರಂಭದ ವರ್ಷಗಳು,ದಶಕಗಳ ಕಾಲವಧಿಯಲ್ಲಿ ಕಷ್ಟದ ಸಂದರ್ಭಗಳಲ್ಲೇ ಶಿಕ್ಷಣ ಕೇಂದ್ರವು ಮುಂದುವರಿಯಿತಾದರೂ ಆ ವ್ಯಕ್ತಿ ದೃತಿಗೆಡದೆ ಮುನ್ನೆಡೆಸುವ ಮಹತ್ವಾಕಾಂಕ್ಷೆಯೊಂದಿಗೆ ಎಲ್ಲಾ ಅಡೆತಡೆಗಳನ್ನು ಎದುರಿಸಿದರು. ಆ ನಂತರದಲ್ಲಿ ಚಿತ್ರದುರ್ಗದ ಕೋಟೆಯ ಹೆಬ್ಬಾಗಿಲಿನ ಎದುರಿನ ನಿವೇಶನದಲ್ಲಿಯೇ ಮದಕರಿನಾಯಕ ವಿದ್ಯಾಸಂಸ್ಥೆ ನೆಲೆಯೂರಿತು.
ಪ್ರಾಥಮಿಕ ಹಂತದಿಂದ ಪದವಿ,ಸ್ನಾತಕೋತ್ತರ ಪದವಿ,ಬಾಲಕ,ಬಾಲಕಿಯರಿಗೆ ಪ್ರತ್ಯೇಕ ತರಗತಿ,ನರ್ಸಿಂಗ್ ಕಾಲೇಜ್,ಬಿಎಡ್ ಹೀಗೆ ಶಿಕ್ಷಣದ ಸೌಲಭ್ಯ ತುಂಬಾ ವಿಸ್ತರವಾಗಿ ಮತ್ತು ಎಲ್ಲವೂ ಒಂದೆಡೆ ಲಭ್ಯವಾಗುವ ಅವಕಾಶ ಲಭ್ಯವಾಯಿತು. ಸ್ವತಃ ವಿದ್ಯಾಪ್ರೇಮಿಯೂ ಆಗಿದ್ದ ಆ ವ್ಯಕ್ತಿಗೆ ಬಡವರ ಬಗೆಗಿನ ಕಾಳಜಿ ಅಪಾರವಾಗಿತ್ತು.ಫೀ ಬಗ್ಗೆ ಒತ್ತಾಯ ಮಾಡಿದ ಸಂದರ್ಭಗಳು ಇಲ್ಲವೇ ಇಲ್ಲ ಎಂಬುದು ಉತ್ಪ್ರೇಕ್ಷೆಯ ಮಾತೇನಲ್ಲ. ಎಷ್ಟೋ ಮಂದಿ ಪೂರ್ಣ ಉಚಿತವಾಗಿಯೇ ವಿದ್ಯಾಭ್ಯಾಸ ಮಾಡುವ ಅವಕಾಶ ಪಡೆದಿರುವುದೂ ಉಂಟು.
ವಿದ್ಯೆಗೆ ಮುಕ್ತ ಅವಕಾಶ ನೀಡಿದಂತೆ ಇತರೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಅವರದು ಉದಾರಹಸ್ತವಾಗಿತ್ತು ಆತ ಬದುಕಿರುವವರೆಗೂ ನಿತ್ಯದಾಸೋಹಎನ್ನುವ ರೀತಿಯಲ್ಲಿ ಅವರವರ ಅಗತ್ಯಾನುಸಾರ ಉದಾರವಾಗಿ ಧನ ಸಹಾಯ ಮಾಡುವಂತಹ ವಿಶೇಷ ಗುಣ ಅವರಲ್ಲಿತ್ತು.ದೈವದ ಬಗೆಗಿನ ಅಪಾರ ಶ್ರದ್ಧೆಯಿಂದಾಗಿ ದೇಗುಲ,ಕಲ್ಯಾಣಮಂಟಪಗಳ ಹಾಗೂ ಜಾತ್ರೆ, ಕಾರ್ತೀಕೋತ್ಸವ,ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಇವರ ಸಹಕಾರ ಸದಾಸಿದ್ಧ ಎಂಬಂತಾಗಿತ್ತು.
ಹಾಗೆಂದ ಮಾತ್ರಕ್ಕೆ ಈ ವ್ಯಕ್ತಿ ಆಗರ್ಭ ಶ್ರೀಮಂತಿಕೆಯ ಕುಟುಂಬದವರಾಗಿರಲಿಲ್ಲ. ಮತ್ತು ಶಿಕ್ಷಣ ಕೇಂದ್ರವನ್ನು ವ್ಯಾಪಾರೀಕರಣ ಗೊಳಿಸಿ, ದುರಾಸೆಯಿಂದ ಬಾಚಿ ಕೊಂಡಿದ್ದೂ ಇಲ್ಲವೇ ಇಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬಂತೆ ಸಮಾಜದಿಂದಲೇ ಲಭ್ಯವಾಗುತ್ತಿದ್ದ ಆರ್ಥಿಕ ಮೂಲವನ್ನು ಸಾಧ್ಯವಾದ ಮಟ್ಟಿಗೆ ಅಥವಾ ಇನ್ನೊಂದು ಅರ್ಥದಲ್ಲಿ ಗರಿಷ್ಟವಾಗಿಯೇ ಸಾಮಾಜಿಕ, ಧಾರ್‍ಮಿಕ ಹಾಗೂ ಸಾಂಸ್ಕೃತಿಕ ಸೇವಾ ಚಟುವಟಿಕೆಗಳಿಗೆ ವಿನಿಯೋಗಿಸುವಂತಹ ಗುಣ ಅವರಿಗೆ ರೂಢಿಯಾಗಿತ್ತು.
ನಮ್ಮಲ್ಲಿ ಬಹಳಷ್ಟು ಮಂದಿ ಧನವಂತರಿಗೇನೂ ಕೊರತೆಯಿಲ್ಲ. ಆದರೆ ಕೊಡುವಂತಹ ಧಾರಾಳ ಮನಸ್ಕರ ಸಂಖ್ಯೆ ತುಂಬಾ ಕಡಿಮೆ ಎನ್ನಬಹುದು. ಆದರೆ ಚಿತ್ರದುರ್ಗದ ಮಟ್ಟಿಗೆ ಈ ವ್ಯಕ್ತಿ ಮಾತ್ರ ಅಂತಹ ಧಾರಾಳಿಗರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿರುತ್ತಾರೆ ಎಂಬುದರಲ್ಲಿ ಎರಡನೇ ಮಾತಿಲ್ಲ.
ಸಂಘ ಸಂಸ್ಥೆಗಳು, ಗುರುಪೀಠಗಳೂ ಇವರ ಶೈಕ್ಷಣಿಕ ಸೇವಾ ಚಟುವಟಿಕೆಯನ್ನು ಗುರುತಿಸಿ ಸನ್ಮಾನಿಸಿವೆ. ರಾಜ್ಯ ಸರ್ಕಾರದ ಉನ್ನತಮಟ್ಟದ ಶ್ರೀ ವಾಲ್ಮೀಕಿ ಪ್ರಶಸ್ತಿಯೂ ಇವರಿಗೆ ಒಲಿದಿತ್ತು. ೮೩- ಇಹಲೋಕಯಾತ್ರೆ ಮುಗಿಸಲೇಬೇಕಾದ ವಯಸ್ಸೇನಲ್ಲ. ಸೆಂಚುರಿ ಬಾರಿಸಿದ್ದರೆ ಅದು ಸಮಾಜಕ್ಕೆ ಇನ್ನಷ್ಟು ಭಾಗ್ಯ ದೊರೆಯುತ್ತಿತ್ತೆಂಬುದರಲ್ಲೂ ಸಂದೇಹವೇ ಇಲ್ಲ. ಆದರೆ ವಿಧಿ ವಿಲಾಸ ತಲೆಬಾಗಲೇಬೇಕು. ಸದಾ ಹಸನ್ಮುಖಿಯಾಗಿ,ಕೊಡುಗೈದಾನಿಯಾಗಿ, ಶಿಕ್ಷಣ ತಪಸ್ವಿಯಾಗಿ ಸಮಾಜಕ್ಕೆ ತಮ್ಮದೇ ವಿಶಿಷ್ಟ ಸೇವೆಯನ್ನು ಸಲ್ಲಿಸಿದ ಆ ಮಹಾನ್ ಚೇತನ ಡಿ.ಬೋರಪ್ಪ ಅವರ ನೆನಪು ಚಿರಂತನ.                                                                                                                                              – ವಿ.ಹನುಮಂತಪ್ಪ

Be the first to comment on "ಚಿತ್ರದುರ್ಗಕ್ಕೊಬ್ಬರೆ ಬೋರಪ್ಪ"

Leave a comment

Your email address will not be published.


*