ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳ ಒತ್ತಾಯ

Share
  • 91
    Shares

ಸಾಣೇಹಳ್ಳಿ, – ಇಲ್ಲಿನ ತರಳಬಾಳು ಜಗದ್ಗುರು ಶಾಖಾ ಮಠದ ಪೀಠಾಧ್ಯಕ್ಷರಾದ ಡಾ|| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಪತ್ರಿಕಾ ಹೇಳಿಕೆಯಲ್ಲಿ – ರಾಜ್ಯ ಸರಕಾರ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಕುರಿತಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಸಲುವಾಗಿ ನ್ಯಾ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸಮಿತಿಯು ಕೂಲಂಕಶವಾಗಿ ಅಧ್ಯಯನ ನಡೆಸಿ `ಲಿಂಗಾಯತ ಧರ್ಮ’ ಸ್ವತಂತ್ರ ಧರ್ಮದ ಸ್ಥಾನ-ಮಾನಗಳನ್ನು ಪಡೆಯಲು ಎಲ್ಲ ರೀತಿಯಿಂದಲೂ ಅರ್ಹವಾಗಿದೆ ಎನ್ನುವುದನ್ನು ತನ್ನ ವರದಿಯಲ್ಲಿ ತಿಳಿಸಿದೆ.

ಈ ವರದಿಯನ್ನು ರಾಜ್ಯ ಸರಕಾರ ಅನುಮೋದಿಸಿ ಕೇಂದ್ರಕ್ಕೆ ಸಲ್ಲಿಸುವ ಬಗ್ಗೆ ನಿನ್ನೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ಸೇರಿದಾಗ ಸಚಿವರ ಭಿನ್ನಾಭಿಪ್ರಾಯದಿಂದಾಗಿ ಚರ್ಚೆ ಅಪೂರ್ಣಗೊಂಡು ಸಭೆಯನ್ನು ಮುಂದೂಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದು ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಿರುವಾಗ ಅದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ ಒಮ್ಮತ ಅಭಿಪ್ರಾಯಕ್ಕೆ ಬರಬೇಕಾಗಿತ್ತು. ಆದರೆ ಪರಸ್ಪರ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಲಿಂಗಾಯತ ಧರ್ಮಕ್ಕೆ ಮಾಡುವ ಅಪಚಾರ. ಆದುದರಿಂದ ಪ್ರತಿಯೊಬ್ಬರೂ ತಮ್ಮ ಸ್ವಾರ್ಥ, ಪ್ರತಿಷ್ಠೆಗಳನ್ನು ಬಿಟ್ಟು ಧರ್ಮದ ಹಿನ್ನೆಲೆಯಲ್ಲಿ ವರದಿಯನ್ನು ಅನುಮೋದಿಸುವುದು ನ್ಯಾಯಸಮ್ಮತ.

ಲಿಂಗಾಯತ ಧರ್ಮ ಸ್ವತಂತ್ರವಾದರೆ ಇದರಿಂದ ಯಾರಿಗೂ ಕೆಡುಕಾಗದು; ಬದಲಾಗಿ ಅಲ್ಪಸಂಖ್ಯಾತ ಸ್ಥಾನ-ಮಾನ ದೊರೆತು ಸಮಾಜ ಬಾಂಧವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಹೆಚ್ಚುವವು. ವೀರಶೈವರೂ ಲಿಂಗಾಯತ ಧರ್ಮದ ಭಾಗವಾಗಿ ಸೇರಲು ಈ ವರದಿಯಲ್ಲಿ ಅವಕಾಶವಿರುವುದರಿಂದ ಯಾರಿಗೂ ಹಾನಿಯಾಗದು. ಇಲ್ಲಿ ಧರ್ಮ ಒಡೆಯುವ ಪ್ರಶ್ನೆ ಉದ್ಭವಿಸದು. ಆದುರಿಂದ ಈ ವಿಚಾರವನ್ನು ರಾಜಕೀಯಗೊಳಿಸದೆ ರಾಜ್ಯ ಸರಕಾರ ಕೂಡಲೆ ಈ ವರದಿಯನ್ನು ಒಪ್ಪಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕು ಮತ್ತು ಕೇಂದ್ರ ಸರಕಾರ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Be the first to comment on "ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳ ಒತ್ತಾಯ"

Leave a comment

Your email address will not be published.


*