ಸರ್ಕಾರಿ ಕಾಲೇಜಿನಲ್ಲೂ ಪ್ರತಿಭಾಸಂಪನ್ನರ ಪಡೆ ನಿರ್ಮಿಸಿದ ಶಿಕ್ಷಣಸಂಘಟಕ ಈ ಪ್ರಿನ್ಸಿಪಾಲ್

Share
  • 29
    Shares

ದಾವಣಗೆರೆ-ಜಿಲ್ಲೆಯ ಉನ್ನತ ಶಿಕ್ಷಣ,ಶೈಕ್ಷಣಿಕ ಆಡಳಿತ,ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿಯವರದು ಗಮನಾರ್ಹ ಹೆಸರು. ಅಧ್ಯಾಪಕರಾಗಿ,ಪ್ರಾಧ್ಯಾಪಕರಾಗಿ,ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸಂಶೋಧನಾ ಮಾರ್ಗದರ್ಶಕರಾಗಿ ಹಾಗು ಪ್ರಾಂಶುಪಾಲರಾಗಿ ಕಳೆದ ೧೭ ವರ್ಷಗಳಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಕಾಲೇಜಿನ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯ ವಾದುದು. ಸರ್ಕಾರದ ಇಲಾಖೆಗಳು, ಜನಪ್ರತಿನಿಧಿಗಳು,ಸ್ಥಳೀಯ ಸಂಸ್ಥೆಗಳು ಹಾಗೂ ಕೊಡುಗೈ ದಾನಿಗಳ ನೆರವಿನಿಂದ ಕಾಲೇಜಿನ ಮೂಲಭೂತ ಸೌಕರ್ಯಗಳಾದ ಹೆಚ್ಚುವರಿ ಕೊಠಡಿಗಳ ನಿರ್ಮಾಣ,ಉತ್ತಮ ಒಳಚರಂಡಿ ವ್ಯವಸ್ಥೆ,ಕಾಲೇಜು ಆವರಣದಲ್ಲಿ ಹೈ-ಮಾಸ್ಟ್ ದೀಪ ವ್ಯವಸ್ಥೆ, ನಿರಂತರ ನೀರಿನ ಸರಬರಾಜು ವ್ಯವಸ್ಥೆ, ಸುಸಜ್ಜಿತ ಲ್ಯಾಬ್‌ಗಳು…ಹೀಗೆ ಹಲವಾರು ಸೌಲಭ್ಯಗಳ ಹೆಚ್ಚಳಕ್ಕೆ ಇವರು ವಿಶೇಷ ಕಾಳಜಿ ವಹಿಸಿದ್ದಾರೆ.
ಶೈಕ್ಷಣಿಕ ಗುಣಮಟ್ಟ ಹಾಗೂ ಶಿಸ್ತಿನ ವಾತಾವರಣ ಮೂಡಿಸಿ, ಕಾಲೇಜಿನ ಜನಪ್ರಿಯತೆಯನ್ನು ಹೆಚ್ಚಿಸಿ, ವಿಶೇಷವಾಗಿ ಗ್ರಾಮೀಣ ಬಡ ವಿದ್ಯಾರ್ಥಿ ಸಮೂಹದ ಮೆಚ್ಚುಗೆಗೆ ಪಾತ್ರರಾಗುವ ಮೂಲಕ ತಮ್ಮ ಗ್ರಾಮೀಣ ಪರಿಸರ ಮೂಲದ ಪ್ರಾಮುಖ್ಯತೆಗೆ ಆದ್ಯತೆ ನೀಡುವಲ್ಲಿ ತೃಪ್ತಿಯನ್ನು ಕಂಡಿದ್ದಾರೆನ್ನಬಹುದು.
ಸುಮಾರು ೩೪ ವರ್ಷಗಳ ಸೇವೆಯ ನಂತರ ಇದೇ ೩೧ ರಂದು ವಯೋನಿವೃತ್ತಿ ಹೊಂದುತ್ತಿರುವ ಡಾ.ಕಲಮರಹಳ್ಳಿಯವರಿಗೆ ‘ಜಿಲ್ಲೆ ಸಮಾಚಾರ’ ಸಾರ್ವಜನಿಕರ ಪರವಾಗಿ ಹಾಗೂ ಪತ್ರಿಕೆಯ ಓದುಗರ ಪರವಾಗಿ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿ, ಅವರ ನಿವೃತ್ತ ಜೀವನ ಕ್ರಿಯಾಶೀಲವಾಗಿರಲಿ ಎಂದು ಹಾರೈಸುತ್ತದೆ.


ಇತ್ತೀಚಿನ ಒಂದು ದಿನ ತಂಪಾದ ಸಂಜೆ ಹೊತ್ತಿನಲ್ಲಿ ಕಾಲೇಜು ಆವರಣದಲ್ಲಿರುವ ಕಲ್ಲು ಬೆಂಚುಗಳ ಮೇಲೆ ಕುಳಿತು ಡಾ.ಕಲಮರಹಳ್ಳಿ ನಮ್ಮೊಂದಿಗೆ ತಮ್ಮ ಬದುಕು ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು. ಅದರ ಅಕ್ಷರ ರೂಪ ಇಲ್ಲಿದೆ.
ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಚಳ್ಳಕೆರೆ ತಾಲ್ಲೂಕಿನಲ್ಲಿ ಪೂರೈಸಿದ ನಂತರ ಚಿತ್ರದುರ್ಗದಲ್ಲಿ ಬಿ.ಎ.ಪದವಿಯನ್ನು ಪಡೆದು ಕನ್ನಡ ಎಂ.ಎ. ಮಾಡಲು ಮೈಸೂರಿನ ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯನ್ನು ಸೇರಿದಾಗ ಡಾ.ಹಾ.ಮಾ.ನಾಯಕರು ಅದರ ನಿರ್ದೇಶಕರು. ಉದ್ದಾಮ ಪಂಡಿತರು ಅಲ್ಲಿಯ ಅಧ್ಯಾಪಕ ವರ್ಗದಲ್ಲಿದ್ದರು. ಚೆನ್ನಯ್ಯ, ಅಂಬಳಿಕೆ ಹಿರಿಯಣ್ಣ, ವೆಂಕಟಾಚಲಶಾಸ್ತ್ರಿ, ಜೀಶಂಪ,ಸಿಪಿಕೆ,ರಾಮೇಗೌಡ,ಹಿ.ಶ.ಅರ್‍ವಿಯಸ್ ಸುಂದರಂ ಇವರುಗಳಿಂದ ಪ್ರೇರಣೆ ಪಡೆದು, ಜಾನಪದವನ್ನು ವಿಶೇಷ ವಿಷಯವನ್ನಾಗಿ ಅಧ್ಯಯನ ಮಾಡಿ ಎಂ.ಎ.ಪೂರೈಸಿದರು. ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರು ಅಲ್ಲಿ “ಮದಕರಿ ಬಳಗ”ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಅದರ ಅಧ್ಯಕ್ಷರಾದ ಪ್ರೊ.ಎಂ.ವಿ.ಶ್ರೀನಿವಾಸಮೂರ್ತಿಯವರು ಜೀಶಂಪರವರ ‘ಜಾನಪದ ಕಲಾಕೂಟ’ ಸಂಘಟನೆಯೂ ಸಾಂಸ್ಕೃತಿಕವಾಗಿ ಬೆಳೆಯಲು ಕಲಮರಹಳಿಯವರಿಗೆ ಸಹಾಯವಾಯಿತು.ಚಿತ್ರದುರ್ಗ ಜಿಲ್ಲೆಯವರೇ ಆದ ಪಿ.ಆರ್.ತಿಪ್ಪೇಸ್ವಾಮಿ (ಜಾನಪದ ಮ್ಯೂಸಿಯಂನ ಕ್ಯುರೇಟರ್) ಪರಿಚಯವಾಗಿ, ಅವರ ಆತ್ಮೀಯ ಸ್ನೇಹವೂ ದೊರಕಿತು. ಸಾಯಿಬಾಬಾರ ಡೆಂಗಿಯ ವಿರುದ್ದದ ಒಂದು ಬೀದಿನಾಟಕವನ್ನು ಈ ಸಂದರ್ಭದಲ್ಲಿ ರಾಜ್ಯದ ಬಹುಭಾಗದಲ್ಲಿ ಅಭಿನಯಿಸಿದುದನ್ನು ಮಲ್ಲಿಕಾರ್ಜುನ ಕಲಮರಹಳ್ಳಿ ವಿಶೇಷವಾಗಿ ಸ್ಮರಿಸಿಕೊಂಡರು.ಬಯಲಾಟ,ಕೋಲಾಟ,ಇತರೆ ಪ್ರದರ್ಶನಾತ್ಮಕ ಕಲೆಗಳು ಇವರ ಬದುಕಿನ ಒಂದು ಅವಿಭಾಜ್ಯ ಅಂಗವಾದವು.

ಕೊಡಗಿನ ಬೆಡಗಿಯೊಂದಿಗೆ ಧರ್ಮಸ್ಥಳದಲ್ಲಿ ಕಂಕಣ ಭಾಗ್ಯ


ಚಳ್ಳಕೆರೆಯ ಬಯಲು ಸೀಮೆಯಿಂದ ಕರ್ನಾಟಕ ಕಾಶ್ಮೀರವೆಂಬ ಹೆಗ್ಗಳಿಕೆಗೆ ಪಾತ್ರವಾದ ಕೊಡಗಿಗೆ ವೃತ್ತಿನಿಮಿತ್ತ ಆಗಮಿಸಿದಾಗ,ಅಲ್ಲಿಯ ಭೂರಮೆಯ ಸೌಂದರ್ಯಕ್ಕೆ ಮಾರುಹೋದರು. ಕೊಡಗಿನ ಬೆಡಗಿ ಕುಸುಮಲತಾರವರಿಗೆ ಮನಸೋತರು. ಎರಡೂ ಕಡೆಯವರ ಮನ ಒಲಿಸಿ,ಒಪ್ಪಿಗೆ ಪಡೆದು ಧರ್ಮಸ್ಥಳದಲ್ಲಿ ಬಂಧುಗಳ ಸಮ್ಮುಖದಲ್ಲಿ ಅಂತರಜಾತಿಯ ಮದುವೆಯಾಗಿ, ದಾಂಪತ್ಯ ಜೀವನಕ್ಕೆ ಮಲ್ಲಿಕಾರ್ಜುನ ನಾಂದಿ ಹಾಡಿದರು.
ಓರ್ವಪುತ್ರ ಈಗ ಸಿವಿಲ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಪುತ್ರಿ ಪಿಯು ವಿದ್ಯಾರ್ಥಿನಿ.
ತಮ್ಮ ಎಲ್ಲ ಶೈಕ್ಷಣಿಕ,ಸಂಶೋಧನಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪತ್ನಿ ಕುಸುಮಲತಾ ಪೂರ್ಣ ಸಹಕಾರ ನೀಡುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ವೃತ್ತಿಯಲ್ಲಿ ತೃಪ್ತಿ, ಪುಟ್ಟ ಸಂಸಾರ,ಕೈ ತುಂಬಾ ಸಂಬಳ,ಸುಸಜ್ಜಿತ ಗೃಹಗ್ರಂಥಾಲಯ… ಬದುಕಿನ ಧನ್ಯತೆಗೆ ಇನ್ನೇನು ಬೇಕಾದೀತು?!

ಕಲಮರಹಳ್ಳಿ ‘ಕನ್ನಡಕ್ಕೆ’ ಬಂದ ಬಗೆ

ಪದವಿಪೂರ್ವ ವಿದ್ಯಾಭ್ಯಾಸ ನಂತರ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಸೇರಲು ಬಂದ ಕಲಮರಹಳ್ಳಿಯವರಿಗೆ ನಿರಾಸೆ ಕಾದಿತ್ತು. ಆಗ ಜನಪ್ರಿಯವಾಗಿದ್ದ ಹೆಚ್‌ಇಪಿ ಕಾಂಬಿನೇಷನ್ ಸಿಗಲಿಲ್ಲ, ಕಡಿಮೆ ಅಂಕಗಳ ಕಾರಣದಿಂದ. ಎಸ್‌ಕೆಹೆಚ್ ಎಂಬ ಇನ್ನೊಂದು ಬೇಡಿಕೆ ಇಲ್ಲದ ಕಾಂಬಿನೇಷನ್ ಇತ್ತು. ಇದರಲ್ಲಿ ಐಚ್ಚಿಕ ಕನ್ನಡ ಒಂದು ವಿಷಯವಾಗಿತ್ತು. ಕನ್ನಡ ಕಷ್ಟ ಎಂದಾಗಿತ್ತು ಶಬ್ದಮಣಿ ದರ್ಪಣ ಗ್ರಂಥ ಓದಲು ವಿದ್ಯಾರ್ಥಿಗಳು ಹೆದರುತ್ತಿದ್ದರು.
ಕಡಿಮೆ ಅಂಕ ಎಂಬ ಕಾರಣದಿಂದ ಈ ಎಸ್‌ಕೆಹೆಚ್ ಕಾಂಬಿನೇಷನನ್ನು ಒತ್ತಾಯಪೂರ್ವಕವಾಗಿ ಕಲಮರಹಳ್ಳಿಗೆ ನೀಡಲಾಯಿತು. ‘ಕನ್ನಡ’ಕ್ಕೆ ಬೆದರಿ ಒಂದು ತಿಂಗಳು ಅವರು ಕಾಲೇಜಿನತ್ತ ತಲೆ ಹಾಕಲಿಲ್ಲ. ಕಾಂಬಿನೇಷನ್ ಬದಲಿಸಲು ಮಾಜಿ ಮಂತ್ರಿ ಬಿ.ಎಲ್.ಗೌಡರಿಂದ ಶಿಫಾರಸ್ಸು ಮಾಡಿಸಿದರೂ ಪ್ರಿನ್ಸಿಪಾಲರು ಜಗ್ಗಲಿಲ್ಲ.ಒಂದು ದಿನ ಪ್ರಿನ್ಸಿಪಾಲರಾದ ಸಿದ್ದಲಿಂಗಯ್ಯನವರು ಕನ್ನಡ ಅಧ್ಯಾಪಕಿ ಶ್ರೀಮತಿ ತಾರಿಣಿದೇವಿಯವರನ್ನು ಕರೆದು ಈ ವಿದ್ಯಾರ್ಥಿಗೆ ಸರಿಯಾಗಿ ಕೌನ್ಸಿಲಿಂಗ್ ಮಾಡುವಂತೆ ಹೇಳಿದರು.
ತಾರಿಣಿದೇವಿಯವರು ಕಲಮರಹಳ್ಳಿಯವರನ್ನು ತಮ್ಮ ಮನೆಗೆ ಕರೆದೊಯ್ದರು. ಸಾಹಿತ್ಯ ಅಧ್ಯಯನದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಕನ್ನಡದಲ್ಲಿ ಆಸಕ್ತಿ ಚಿಗುರುವಂತೆ ಮಾಡಿದರು. ಜೊತೆಗೆ ಒಂದು ನೂರು ರೂಪಾಯಿಗಳನ್ನು ಕೈಯಲ್ಲಿಟ್ಟರು (ಅಂದಿಗೆ ದೊಡ್ಡ ಮೊತ್ತವೇ ಹೌದು) ಕಾಲೇಜಿಗೆ ಹೋಗಿದ್ದಾಯ್ತು. ಪರೀಕೆ ಬರೆದದ್ದಾಯ್ತು. ಕನ್ನಡ ಮೇಜರ್‌ನಲ್ಲಿ ಫೇಲ್! ಧೈರ್ಯಗೆಡದೆ ಮತ್ತೊಮ್ಮೆ ಓದಿ ಪದವಿಯಲ್ಲಿ ಪಾಸಾದರು ಕಲಮರಹಳ್ಳಿ.

ಸಾಹಿತ್ಯ ಕೃಷಿ ಮತ್ತು ಪ್ರಶಸ್ತಿಗಳು

ಕಲಮರಹಳ್ಳಿಯ ಕಥೆಗಳು, ಕಥಾ ಕಣಜ (ಜೀವನಚರಿತ್ರೆ) ಗೊಲ್ಲರ ಇತಿಹಾಸ ಮತ್ತು ಕಾಡಹಳ್ಳಿ ಹಾಡು (ಕವನಸಂಕಲನ) ಇತರರೊಂದಿಗೆ ಸಂಪಾದಿತ ಕೃತಿಗಳು : ಬೆಳ್ಳಾರೆ ಬೆಳಕು,ಲೋಕಾಯತ, ದವನಸಿರಿ, ತೆನೆ-ತೇರು ಹಾಗೂ ಜನಿಗೆ. ಸಂವಹನ ಕನ್ನಡ ಮತ್ತು ಸಾಹಿತ್ಯ ಸುಗ್ಗಿ ವಿಶ್ವವಿದ್ಯಾಲಯಗಳಿಗೆ ಅವರ ಕೃತಿಗಳು ಪಠ್ಯಗಳಾಗಿ ಆಯ್ಕೆಗೊಂಡಿದ್ದವು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ (ಪುಸ್ತಕ ಬಹುಮಾನ-೧೯೮೬) ಸಂಕ್ರಮಣ ಕಾವ್ಯ ಬಹುಮಾನ-೧೯೮೮ ಹಾಗೂ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ (೨೦೦೮)

Be the first to comment on "ಸರ್ಕಾರಿ ಕಾಲೇಜಿನಲ್ಲೂ ಪ್ರತಿಭಾಸಂಪನ್ನರ ಪಡೆ ನಿರ್ಮಿಸಿದ ಶಿಕ್ಷಣಸಂಘಟಕ ಈ ಪ್ರಿನ್ಸಿಪಾಲ್"

Leave a comment

Your email address will not be published.


*