ರಕ್ತದಾನದಿಂದ ನವಚೈತನ್ಯ-ಆರೋಗ್ಯ ವೃದ್ಧಿ : ಕೆಂಗಬಾಲಯ್ಯ

Share
  • 11
    Shares

ದಾವಣಗೆರೆ-ರಕ್ತದಾನ ಮಹಾದಾನವಾಗಿದ್ದು, ರಕ್ತದಾನದಿಂದ ದಾನಿಯ ಆರೋಗ್ಯವೂ ವೃದ್ಧಿಯಾಗಿ ನವಚೈತನ್ಯದಿಂದಿರಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ರಿಂಗ್ ರಸ್ತೆಯಲ್ಲಿರುವ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಇಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಅನ್ನದಾನಕ್ಕಿಂತ ಶ್ರೇಷ್ಟ ವಿದ್ಯಾದಾನ. ಅದಕ್ಕಿಂತಲೂ ಮಿಗಿಲಾದದ್ದು ರಕ್ತದಾನ ಎಂದರು.ನಾವೂ ಬದುಕಿ ಇತರರಿಗೂ ಬದುಕಲು ಬಿಡಬೇಕೆಂಬ ತತ್ವದ ಮೇಲೆ ಜೀವಿಸಬೇಕು. ನಮಗೆ ನಮ್ಮ ಜೀವದ ಬೆಲೆ ಅರ್ಥವಾದಾಗ ಇತರರ ಜೀವದ ಬೆಲೆ ತಿಳಿಯುತ್ತದೆ. ರಕ್ತದಾನ ಒಂದು ಪುಣ್ಯದ ಕೆಲಸವಾಗಿದ್ದು ಒಬ್ಬರ ರಕ್ತ ಇನ್ನೊಬ್ಬರ ಪ್ರಾಣ ಉಳಿಸುತ್ತದೆ. ಆದ್ದರಿಂದ ರಕ್ತದಾನಕ್ಕೆ ಪ್ರೇರೇಪಿಸುವುದೂ ಕೂಡ ಅಷ್ಟೇ ಮುಖ್ಯವಾಗುತ್ತದೆ. ರಕ್ತದಾನ ಮಾಡುವುದರಿಂದ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಆಗುತ್ತದೆ. ಹೊಸ ಜೀವಕೋಶಗಳು ಹುಟ್ಟಿ ನವ ಚೈತನ್ಯ ನಮ್ಮಲ್ಲಿ ಮೂಡುತ್ತದೆ.
ರಕ್ತಸ್ರಾವಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾದ ಹಿಮೊಫೀಲಿಯಾ ಎಂಬ ಶೋಚನೀಯ ರೋಗಕ್ಕೆ ತುತ್ತಾದವರ ಆರೋಗ್ಯಕ್ಕಾಗಿ ಪಣ ತೊಟ್ಟಿರುವ ಡಾ. ಸುರೇಶ್ ಹನಗವಾಡಿ ದಂಪತಿಗಳು ಮತ್ತು ಹಿಮೊಫೀಲಿಯಾ ಸೊಸೈಟಿಯ ಕಾರ್ಯ ಶ್ಲಾಘನೀಯವಾದದ್ದು. ಈ ನಿಟ್ಟಿನಲ್ಲಿ ಪ್ರಾಣ ಉಳಿಸಬಲ್ಲ ರಕ್ತದಾನದ ಮಹತ್ವ ಅರಿತು ಎಲ್ಲರೂ ರಕ್ತದಾನ ಮಾಡುವ ಸಂಕಲ್ಪ ತೊಡಬೇಕೆಂದು ಕರೆ ನೀಡಿದರು.


ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಜಿಲ್ಲಾ ಸಂಸ್ಥಾಪಕರಾದ ಡಾ. ಸುರೇಶ್ ಹನಗವಾಡಿ ಮಾತನಾಡಿ, ರಕ್ತದಾನ ಜೀವದಾನಕ್ಕೆ ಸಮ. ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನವನ್ನು ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಹಾಗೂ ಇತರರಲ್ಲಿ ರಕ್ತದಾನ ಕುರಿತು ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಹಿಂದೆ ರಕ್ತ ಪೂರಣದ ಬಗ್ಗೆ ಸಾಕಷ್ಟು ಸಂಶೋಧನೆಗಳಾಗದೆ ಸಾವು-ನೋವುಗಳಿಗೆ ಕಾರಣವಾಗಿತ್ತು. ೧೯೦೨ ರಲ್ಲಿ ಕಾರ್ಲ್ ಲ್ಯಾಂಡ್‌ಸ್ಟೈನರ್ ಎಂಬ ವಿಜ್ಞಾನಿ ರಕ್ತದ ಗುಂಪುಗಳನ್ನು ಕಂಡು ಹಿಡಿದು ರಕ್ತಪೂರಣವನ್ನು ಯಶಸ್ವಿಗೊಳಿಸಿದ ಸ್ಮರಣಾರ್ಥ ಅವರ ಜನ್ಮದಿನ ಜೂ.೧೪ ರಂದು ರಕ್ತದಾನಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಸಂಶೋಧನೆಗಳ ಫಲವಾಗಿ ಇಂದು ಒಂದು ರಕ್ತದ ಯುನಿಟ್ಟಿನಿಂದ ೪ ರಿಂದ ೫ ರೋಗಿಗಳ ಜೀವ ಉಳಿಸಬಹುದಾಗಿದ್ದು ಆ ಮಟ್ಟಕ್ಕೆ ರಕ್ತಪೂರಣ ವಿಭಾಗ ಬೆಳೆದಿದೆ. ೧೮ ರಿಂದ ೬೫ ವಯೋಮಾನದವರೆಗೆ, ಪುರುಷರು ಪ್ರತಿ ಮೂರು ತಿಂಗಳಿಗೊಮ್ಮೆ ಮ
ತ್ತು ಮಹಿಳೆಯರು ಪ್ರತಿ ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನದಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತ ಸೇರಿದಂತೆ ಅನೇಕ ರೋಗಗಳು ಕಡಿಮೆ ಆಗುತ್ತವೆ. ದೇಹದ ಕೊಬ್ಬಿನಂಶ ಕಡಿಮೆ ಆಗುತ್ತದೆ, ರಕ್ತದಾನ ದಾನಿಯನ್ನು ಆರೋಗ್ಯವಾಗಿಡುತ್ತದೆ. ಆದ್ದರಿಂದ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಾಪೂಜಿ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕಿರುವಾಡಿ ಗಿರಜಮ್ಮ ಮಾತನಾಡಿ, ಎಲ್ಲ
ರೂ ರಕ್ತದಾನ ಮಾಡುವಷ್ಟು ಸದೃಢ ಮತ್ತು ಆರೋಗ್ಯವಂತರಾಗಿರಬೇಕು. ಹಿಮೊಫಿಲಿಯಾಕ್ಕೆ ತುತ್ತಾದ ಮಕ್ಕಳಲ್ಲಿ ಉತ್ಸಾಹ ತುಂಬುವ ಕೆಲಸಕ್ಕೆ ಮುಂದಾಗಬೇಕೆಂದು ವೈದ್ಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ತ್ರಿಪುಲಾಂಬ,ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ರಾಘವನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಕ್ತದಾನಿಗಳಾದ ನಟರಾಜ್, ಡಾ. ಆಶಾ, ಗಿರೀಶ್, ಲಕ್ಮಾಜಿ, ಡಾ. ಮಂಜುನಾಥ ಪಾಟಿಲ್, ಮಹಡಿ ಶಿವಕುಮಾರ್, ಹೆಲ್ಪ್‌ಲೈನ್ ಸುಭಾನ್, ಡಾ. ಬಿ.ಕೆ.ವೆಂಕಟೇಶ್, ಡಾ. ಸುರೇಶ್ ಹನಗವಾಡಿ, ಡಾ.ಮೀರಾ ಹನಗವಾಡಿ ಇವರನ್ನು ಸನ್ಮಾನಿಸಲಾಯಿತು. ಚಿಗಟೇರಿ ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಹೆಚ್. ಎಸ್ ರಾಘವೇಂದ್ರಸ್ವಾಮಿ, ಲೈಫ್ ಲೈನ್ ರಕ್ತನಿಧಿಯ ಮುಖ್ಯ ವೈದ್ಯಾಧಿಕಾರಿ ಡಾ. ಎಂ ಎಂ ದೊಡ್ಡಿಕೊಪ್ಪ, ಕೆಎಸ್‌ಎಪಿಎಸ್‌ನ ಐಇಸಿ ವಿಭಾಗದ ಜಂಟಿ ನಿರ್ದೇಶಕ ನಂಜೇಗೌಡ ಪಾಲ್ಗೊಂಡಿದ್ದರು. ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಕಾರ್ಯಕಾರಿ ನಿರ್ದೇಶಕ ಸದಾಶಿವಪ್ಪ ವಂದಿಸಿದರು.

Be the first to comment on "ರಕ್ತದಾನದಿಂದ ನವಚೈತನ್ಯ-ಆರೋಗ್ಯ ವೃದ್ಧಿ : ಕೆಂಗಬಾಲಯ್ಯ"

Leave a comment

Your email address will not be published.


*