ಬಾಲಮಂದಿರದ ಮಕ್ಕಳಿಗೆ ಡಿ.ಸಿ.ಯವರಿಂದ ಕುಶಲೋಪರಿಯೊಂದಿಗೆ ಬ್ಯಾಗ್, ವಾಚ್ ವಿತರಣೆ

Share
  • 41
    Shares

ದಾವಣಗೆರೆ -ವಿದ್ಯಾರ್ಥಿಗಳು ನಿಂತ ನೀರಾಗದೆ ಸದಾ ಚಟುವಟಿಕೆಯಿಂದ ಕೂಡಿರಬೇಕು, ಆಡಬೇಕು, ಓದಬೇಕು, ಕುಣಿಯಬೇಕು. ಸದಾ ಒಂದಿಲ್ಲೊಂದು ಚಟುಚಟಿಕೆಯಿಂದ ಕೂಡಿದ್ದರೆ ಉನ್ನತಿ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಬಾಲಮಂದಿರದ ಮಕ್ಕಳಿಗೆ ಕಿವಿಮಾತು ಹೇಳಿದರು.
ಶ್ರೀ ರಾಮನಗರದ ಸರ್ಕಾರಿ ಬಾಲಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳಿಗೆ ಬ್ಯಾಗು ಮತ್ತು ವಾಚುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮಗೆ ನೀಡಿರುವ ವಾಚ್‌ನಲ್ಲಿರುವ ಮುಳ್ಳುಗಳು ಹೇಗೆ ಸದಾ ಚಲಿಸುತ್ತಿರುತ್ತವೆಯೋ ಹಾಗೇ ನೀವೂ ಸದಾ ಚಲನಸ್ಥಿತಿಯಲ್ಲಿರಬೇಕು. ಓದಲು, ಜೀವನದಲ್ಲಿ ಸಾಧಿಸಲು ಚಲಿಸಬೇಕು. ಚಲಿಸದೇ ಒಂದಡೆ ನಿಂತರೆ ಅದು ಸತ್ತಂತೆಯೇ ಸರಿ. ಜೀವನ ಅಂದರೆ ಓಡುವುದು ನಿಂತರೆ ಜೀವನದಲ್ಲಿ ಜಾಗ ಇಲ್ಲ. ನಾವು ನಿಷ್ಕ್ರಿಯರಾದರೆ ಪ್ರಪಂಚ ನಮ್ಮನ್ನು ಹೊರಹಾಕುತ್ತದೆ. ಯಾವುದೇ ಜೀವಂತ ವಸ್ತು ಚಲಿಸುತ್ತಿರಬೇಕು. ಬಿತ್ತಿದ ಬೀಜ ಮೊಳಕೆ ಬರುತ್ತಿದೆ ಎಂದರೆ ಅದು ಜೀವಂತವಾಗಿದೆ ಎಂದರ್ಥ. ಮೊಳಕೆ ಚಿಗುರಬೇಕು, ಹೂವಾಗಬೇಕು. ಹೂ ಹಣ್ಣು ಬಿಟ್ಟರೆ ಗಿಡದ ಶೋಭೆ ನೋಡಲು ಅಂದವಾಗಿರುತ್ತದೆ. ಹಾಗೇ ಮಕ್ಕಳು ನಗುವ ಗಿಡಗಳಾಗಿರಬೇಕು ಗಿಡಮರಗಳಂತೆ ಬೆಳೆಯಬೇಕು. ಸುವಾಸನೆ ಬೀರಬೇಕು.
ಹಾಗಾಗಬೇಕಾದರೆ, ಕಾಲವನ್ನು ಹೊಂದಿಸಿಕೊಳ್ಳಬೇಕು. ಸರಿದ ಕಾಲ ಮತ್ತೊಮ್ಮೆ ದೊರೆಯುವುದಿಲ್ಲ. ನಿಮಗೆ ನೀಡಿರುವ ವಾಚ್‌ನಲ್ಲಿರುವ ಮುಳ್ಳುಗಳು ಎಂದಿಗೂ ಹಿಂದೆ ಓಡುವುದಿಲ್ಲ. ಹಾಗೆ ನಾವುಗಳು ಜೀವನದಲ್ಲಿ ಹಿಂದೋಗದೆ ಮುಂದೆ ಸಾಗಬೇಕೇಂದರು. ನಂತರ ವಿದ್ಯಾರ್ಥಿಗಳಿಂದ ನಿಲಯದ ಊಟ-ವಸತಿ, ಬಿಸಿನೀರು ಮುಂತಾದವುಗಳ ಬಗ್ಗೆ ಪ್ರಶ್ನೆ ಕೇಳುವುದರ ಮೂಲಕ ಮಾಹಿತಿ ಪಡೆದುಕೊಂಡರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ಬಾಲಮಂದಿರದಲ್ಲಿರುವ ಮಕ್ಕಳು ನಾನಾ ಕಾರಣಗಳಿಂದ ಇಲ್ಲಿಗೆ ಬಂದು ದಾಖಲಾಗಿರುತ್ತಾರೆ. ಅವರುಗಳು ಶ್ರದ್ದೆಯಿಂದ ಅಭ್ಯಾಸ ಮಾಡಿ ಜೀವನ ರೂಪಿಸಿಕೊಳ್ಳಬೇಕೇಂದರು.
ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಅಶೋಕ್‌ಕುಮಾರ್.ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ತಾಲ್ಲೂಕುಗಳ ಸಿಡಿಪಿಓ ಗಳಾದ ಮೈತ್ರಾದೇವಿ, ಭಾರತಿ ಬಣಕಾರ್, ಶಿವಲಿಂಗಪ್ಪ, ಮಾಲತಾ ಸ್ವಾಮಿ ಪೂಜಾರ್, ಸದಾನಂದ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಶೋಭಾ ಟಿ ಆರ್ ಹಾಗೂ ಇಲಾಖಾ ಸಿಬ್ಬಂದಿ ಹಾಜರಿದ್ದರು.

Be the first to comment on "ಬಾಲಮಂದಿರದ ಮಕ್ಕಳಿಗೆ ಡಿ.ಸಿ.ಯವರಿಂದ ಕುಶಲೋಪರಿಯೊಂದಿಗೆ ಬ್ಯಾಗ್, ವಾಚ್ ವಿತರಣೆ"

Leave a comment

Your email address will not be published.


*