ವಿಕಲಚೇತನರು ಎಲ್ಲರಂತೆ ಸಮರ್ಥರು- ಸಂಸದ ಜಿ ಎಂ ಸಿದ್ದೇಶ್ವರ

Share
  • 71
    Shares

ದಾವಣಗೆರೆ-ವಿಕಲಚೇತನರಿಗೆ ಬೇಕಿರುವುದು ಅನುಕಂಪವಲ್ಲ ಬದಲಾಗಿ ನೆರವು. ಅವರು ಎಲ್ಲರಂತೆ ಸಮರ್ಥರಾಗಿದ್ದು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ವಿಕಲಚೇತನರಿಗೆ ಕರೆ ನೀಡಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಭಾರತ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ದಾವಣಗೆರೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಲಿಮ್ಕೊ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್(ಎಡಿಐಪಿ)ಯೋಜನೆಯಡಿ ಜೂ. ೨೮ ರ ಇಂದು ನಗರದ ರೇಣುಕಾ ಮಂದಿರದಲ್ಲಿ ಆಯೋಜಿಸಲಾಗಿದ್ದ ‘ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣಾ ಶಿಬಿರ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ಜಿಲ್ಲೆಯಲ್ಲಿ ಇದು ಮೂರನೇ ಬಾರಿ ವಿಶೇಷಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಮೋದಿ ನೇತೃತ್ವದ ಸರ್ಕಾರ ವಿಶೇಷಚೇತನರ ಏಳ್ಗೆಗಾಗಿ ವಿಶೇಷ ಆಸಕ್ತಿ ವಹಿಸಿ ವಿವಿಧ ರೀತಿಯ ಸಾಧನ-ಸಲಕರಣೆಗಳನ್ನು ನೀಡುತ್ತಿದ್ದು, ಜಿಲ್ಲೆಗೂ ಈ ಯೋಜನೆ ವಿಸ್ತರಿಸುವಲ್ಲಿ ಶ್ರಮಿಸಿದ್ದೇವೆ. ೨೦೧೬-೧೭ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೭೮೪ ವಿಕಲಚೇತನರಿಗೆ ಸುಮಾರು ೪೮ ಲಕ್ಷ ಮೌಲ್ಯದ ಸಾಧನ ಸಲಕರಣೆಗಳನ್ನು ವಿತರಿಸಲಾಗಿತ್ತು. ಪ್ರಸ್ತುತ ೨೦೧೭-೧೮ ನೇ ಸಾಲಿನಲ್ಲಿ ೯೭೪ ಫಲಾನುಭವಿಗಳಿಗೆ ರೂ.೬೬ ಲಕ್ಷದ ವಿವಿಧ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಸೌಲಭ್ಯ ಪಡೆಯದವರು ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಸಿಕೊಂಡು ಪಡೆದುಕೊಳ್ಳಬಹುದು ಎಂದರು.
ವಿಕಲಚೇತನರಿಗೆ ಸೌಲಭ್ಯ ಒದಗಿಸುವ ಕೆಲಸ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಈ ನಿಟ್ಟಿನಲ್ಲಿ ಬುದ್ದಿಮಾಂದ್ಯರ ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ನಗರದ ದೇವರಾಜ ಅರಸು ಬಡಾವಣೆಯಲ್ಲಿ ಎನ್‌ಐಹೆಚ್‌ಎಂ ಕಾರ್ಯಕ್ರಮದಡಿ ಸಿಆರ್‌ಸಿ(ಕಾಂಪೊಸಿಟ್ ರೀಜನಲ್ ಸೆಂಟರ್)ತೆರೆಯಲಾಗಿದ್ದು, ಇಲ್ಲಿ ಪ್ರತಿದಿನ ೨೦ ರಿಂದ ೨೫ ಜನ ತಪಾಸಣೆಗೊಳಗಾಗುತ್ತಿದ್ದಾರೆ. ಈ ಸಿಆರ್‌ಸಿ ಕೇಂದ್ರವನ್ನು ಸುಸಜ್ಜಿತವಾಗಿ ಸ್ಥಾಪಿಸಲು ಆನಗೋಡಿನಲ್ಲಿ ಜಿಲ್ಲಾಡಳಿತ ವತಿಯಿಂದ ೨ ಎಕರೆ ಜಾಗ ನೀಡಲಾಗಿದೆ. ಚಿಕಿತ್ಸೆ ಹಾಗೂ ತರಬೇತಿಗಾಗಿ ಕೇಂದ್ರ ಸರ್ಕಾರ ನೆರವು ನೀಡುವುದು. ಕರ್ನಾಟಕ ಮತ್ತು ಗೋವಾ ರಾಜ್ಯಗಳಿಂದ ಸೇರಿ ದಾವಣಗೆರೆಯಲ್ಲಿ ಒಂದೇ ಇಂತಹ ಕೇಂದ್ರವಿರುವುದು. ಈ ಕೇಂದ್ರ ಜಿಲ್ಲೆಗೆ ತರಲು ಸಾಕಷ್ಟು ಶ್ರಮಿಸಿದ್ದು, ೨೦ ರಿಂದ ೩೦ ಕೋಟಿ ವೆಚ್ಚದಲ್ಲಿ ಇಲ್ಲಿ ಆಸ್ಪತ್ರೆ ಮತ್ತು ತರಬೇತಿ ಕೇಂದ್ರ ತೆರೆಯಲು ಕೇಂದ್ರ ಒಪ್ಪಿಗೆ ಸೂಚಿಸಿದೆ. ಪ್ರಸ್ತುತ ಜಮೀನಿನ ಸುತ್ತ ಇನ್ನಷ್ಟು ಜಾಗ ಸಿಕ್ಕರೆ ಇನ್ನೂ ಉತ್ತಮವಾಗಿ ಕೇಂದ್ರವನ್ನು ನಿರ್ಮಿಸಬಹುದು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಉತ್ತರ ವಿಧಾನಸಭಾ ಕೇತ್ರದ ಶಾಸಕರಾದ ಎಸ್.ಎ.ರವೀಂದ್ರನಾಥ ಮಾತನಾಡಿ, ವಿಕಲಚೇತನರನ್ನು ಹೆಚ್ಚು ಓಡಾಡಿಸದೇ, ತೊಂದರೆಯಾಗದಂತೆ ಯೋಜನೆ-ಸೌಲಭ್ಯಗಳನ್ನು ಅವರಿಗೆ ಒದಗಿಸುವ ಕೆಲಸವಾಗಬೇಕೆಂದು ಒತ್ತಾಯಿಸಿದ ಅವರು, ಅಂಗವೈಕಲ್ಯ ಬಂದ ಮೇಲೆ ವಿವಿಧ ಸಾಧನ-ಸಲಕರಣೆ ನೀಡುವ ಬದಲಾಗಿ, ಅಂಗವೈಕಲ್ಯವೇ ಬಾರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕು. ನಿಯಮಗಳನ್ನು ಆದಷ್ಟು ಸರಾಗಗೊಳಿಸಿಕೊಂಡು ವಿಕಲಚೇತನರನ್ನು ಹೆಚ್ಚು ಓಡಾಡಿಸದೇ ಸೌಲಭ್ಯಗಳನ್ನು ಆದಷ್ಟು ಬೇಗ ಒದಗಿಸಬೇಕು. ಅಂಗವಿಕಲರ ಪೋಷಕರು ಇಂತಹ ಮಕ್ಕಳು ಜನಸಿದರಲ್ಲ ಎಂದು ಮನಸ್ಸಿಗೆ ನೋವು ಮಾಡಿಕೊಳ್ಳದೇ ಮಕ್ಕಳನ್ನು ನೋಡಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜುಳಾ ಟಿ ವಿ ರಾಜು ಮಾತನಾಡಿ, ವಿಕಲಚೇತನರು ಸಾಮಾನ್ಯ ವ್ಯಕ್ತಿಗಳಿಗಿಂತ ಸಮರ್ಥರಾಗಿದ್ದು ಅವರಲ್ಲಿ ವಿಶೇಷವಾದ ಪ್ರತಿಭೆ ಇರುತ್ತದೆ. ಪೋಷಕರು ಇದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಸ್ಥಳೀಯ ಆಡಳಿತ ಸಂಸ್ಥೆಗಳ ಅನುದಾನದಲ್ಲಿ ಶೇ. ೫ ವಿಕಲಚೇತನರಿಗೆ ಮೀಸಲಿಡಲಾಗಿದೆ. ಗ್ರಾಮೀಣ ಭಾಗದಲ್ಲಿ ಇನ್ನೂ ಅನೇಕ ಸೌಲಭ್ಯ ವಂಚಿತರಿದ್ದಾರೆ. ಎಲ್ಲರಿಗೂ ಸೌಲಭ್ಯ ಸಿಗುವಂತೆ ಅಧಿಕಾರಿಗಳು ಸೇರಿದಂತೆ ಎಲ್ಲರೂ ಪ್ರಯತ್ನಿಸಬೇಕು ಎಂದರು.
ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಮಾತನಾಡಿ, ಇವರು ವಿಕಲಚೇತನರಲ್ಲ ಬದಲಾಗಿ ವಿಶೇಷ ಚೇತನರು. ಈ ಬಾರಿಯ ವಿಧಾನಸಭಾ ಚುನವಾಣೆಯಲ್ಲಿ ಸಾಮಾನ್ಯ ವ್ಯಕ್ತಿಗಳು ಶೇ. ೭೫ ಮತದಾನ ಮಾಡಿದರೆ, ವಿಶೇಷಚೇತನರು ಶೇ. ೯೬ ಮತದಾನ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಇಂತಹ ವಿಶೇಷಚೇತನರು ಎಲ್ಲರಂತೆ ಸಂತೋಷದಿಂದಿರಲು ಅನುವಾಗುವಂತೆ ಕೇಂದ್ರ ಸರ್ಕಾರ ಇಂತಹ ಉತ್ತಮ ಯೋಜನೆ ಜಾರಿಗೆ ತಂದಿದ್ದು, ಇಂತಹ ಸೌಲಭ್ಯಗಳ ಉಪಯೋಗ ಪಡೆದು ನಾನೂ ಒಬ್ಬ ಜವಾಬ್ದಾರಿ ಪ್ರಜೆ ಎಂದು ಪ್ರತಿ ವಿಶೇಷಚೇತನರಿಗೂ ಅನ್ನಿಸುವಂತಾಗಬೇಕೆಂದು ಆಶಿಸಿದರು.
ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ವಿ ರಾಮಚಂದ್ರಪ್ಪ, ಮಾಯಕೊಂಡ ವಿಧಾಸಭಾ ಕ್ಷೇತ್ರದ ಶಾಸಕರಾದ ಪ್ರೊ. ಲಿಂಗಣ್ಣ, ಜಿ ಪಂ ಸದಸ್ಯರಾದ ಶೈಲಜಾ ಬಸವರಾಜ್, ಕೆ ಹೆಚ್ ಓಬಳೇಶ್ ಮಾತಾಡಿದರು.
ಕಾರ್ಯಕ್ರಮದಲ್ಲಿ ದೈಹಿಕ ವಿಕಲಚೇತನರಿಗೆ ೧೧ ಬ್ಯಾಟರಿ ಚಾಲಿತ ಟ್ರೈಸೈಕಲ್, ೧೫೯ ಟ್ರೈಸಕಲ್, ೧೬೫ ವೀಲ್‌ಚೇರ್, ೨೧೬ ಊರುಗೋಲು, ೨೨ ವಾಕಿಂಗ್ ಸ್ಟಿಕ್, ೧೦ ರೋಲೇಟರ್, ೩೪ ಸಿ.ಪಿ.ಚೇರ್(ಮೆದುಳುವಾತ ವಿಕಲಚೇತನರಿಗೆ), ಕ್ಯಾಲಿಪರ್‍ಸ್, ಕೃತಕ ಕಾಲುಗಳು, ೫೧೫ ಶ್ರವಣದೋಷ ವಿಕಲಚೇತನರಿಗೆ ಶ್ರವಣ ಸಾಧನ, ದೃಷ್ಟಿದೋಷ ವಿಕಲಚೇತನರಿಗೆ ೪೪ ಬಿಳಿಕೋಲು, ಬ್ರೈಲ್ ಸ್ಲೇಟ್ & ಬ್ರೈಲ್ ಕಿಟ್‌ಗಳು ಹಾಗೂ ಬುದ್ದಿಮಾಂದ್ಯ ವಿಕಲಚೇತನರಿಗೆ ೯೪ ಟಿಎಲ್‌ಎಂ ಕಿಟ್‌ಗಳನ್ನು ವಿತರಿಸಲಾಯಿತು. ಜಿಲ್ಲೆಯ ಒಟ್ಟು ೯೭೪ ಫಲಾನುಭವಿಗಳಿಗೆ ರೂ. ೬೫.೭೪ ಲಕ್ಷ ಮೌಲ್ಯದ ವಿವಿಧ ರೀತಿಯ ೪೫೫೮ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಲಿಮ್ಕೋ ಸಂಸ್ಥೆಯ ವ್ಯವಸ್ಥಾಪಕ ಅನುಪಮ್ ಪ್ರಕಾಶ್ ಸ್ವಾಗತಿಸಿದರು. ಮಹಾನಗರಪಾಲಿಕೆ ಸದಸ್ಯ ಕುಮಾರ್, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ ಹೆಚ್ ವಿಜಯಕುಮಾರ್, ಅಲಿಮ್ಕೋ ಸಂಸ್ಥೆಯ ಪದಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

Be the first to comment on "ವಿಕಲಚೇತನರು ಎಲ್ಲರಂತೆ ಸಮರ್ಥರು- ಸಂಸದ ಜಿ ಎಂ ಸಿದ್ದೇಶ್ವರ"

Leave a comment

Your email address will not be published.


*