‘ಹಬ್ಬಗಳ ಆಚರಣೆ ಸೌಹಾರ್ದದಿಂದಿರಲಿ’ : ಪೊಲೀಸ್ ವರಿಷ್ಟಾಧಿಕಾರಿ ಚೇತನ್

Share
  • 40
    Shares

ರಂಜಾನ್ ಸೌಹಾರ್ದ ಸಭೆ 

ದಾವಣಗೆರೆ -ಯಾವುದೇ ಹಬ್ಬಗಳನ್ನು ಆಚರಿಸುವುದು ಜೀವನದ ನೆಮ್ಮದಿ ಹಾಗೂ ಸಂತೋಷಕ್ಕಾಗಿ ಅಂತಹ ಆಚರಣೆ ಸೌಹಾರ್ದವಾಗಿದ್ದರೆ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾದಂತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ರಂಜಾನ್ ಸೌಹಾರ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಬ್ಬಗಳ ವಾತಾವರಣ ಸೌಹಾರ್ದವಾಗಿರಬೇಕು. ಶೈಕ್ಷಣಿಕ ನಗರಿ, ಬುದ್ದಿಜೀವಿಗಳ ಊರು ಎಂದು ಹೆಸರಾಗಿರುವ ದಾವಣಗೆರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ ಮುಂಜಾಗ್ರತಾ ಕ್ರiವಾಗಿ ಇಲಾಖೆ ಎಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೌಹಾರ್ದ ಸಭೆಗಳನ್ನು ನಡೆಸಿದೆ. ಯಾರೊ ಕೆಲವು ಕಿಡಿಗೇಡಿಗಳು ಹಬ್ಬಿಸುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಅಂತವರನ್ನು ಶಿಕ್ಷಿಸಲು ಇಲಾಖೆ ಸಕಲ ರೀತಿಯಲ್ಲಿ ಸಿದ್ದವಿರುತ್ತದೆ ಎಂದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಎಷ್ಟು ಉಪಯೋಗವೋ ಅಷ್ಟೇ ವೇಗವಾಗಿ ದುರುಪಯೋಗವು ಆಗುತ್ತಿವೆ. ಭಾವನಾತ್ಮಕ ವಿಚಾರಗಳ ಮೇಲೆ ಚರ್ಚೆಗಳಾಗುವುದರಿಂದ ಜನರು ಅಂತಹುಗಳನ್ನು ನಿರ್ಲಕ್ಷಿಸುವುದೇ ಒಳ್ಳೆಯದು ಎಂದರು.
ಇನ್ನು ಜೂನ್‌ನಿಂದ ನವೆಂಬರವರೆಗೆ ಹಬ್ಬಗಳ ಸರಣಿ ರಂಜಾನ್, ಗೌರಿ-ಗಣೇಶ, ದೀಪಾವಳಿ, ಬಕ್ರೀದ್ ಹೀಗೆ ಹಬ್ಬಗಳ ಸಾಲು. ಹಾಗಾಗಿ ಪ್ರತಿ ಧರ್ಮ ಜಾತಿ-ಜನಾಂಗದವರು ಅವರವರ ಹಬ್ಬಗಳನ್ನು ಎಲ್ಲರೊಂದಿಗೆ ಬೆರೆತು ಸೌಹಾರ್ದದಿಂದ ಆಚರಿಸಲು ಪೊಲೀಸ್ ಇಲಾಖೆ ಸಹಕರಿಸುತ್ತದೆಂದರು.
ಸಭೆಯಲ್ಲಿ ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡರಾದ ಸಾದಿಕ್ ಪೈಲ್ವಾನ್ ಮಾತನಾಡಿ ಜಿಲ್ಲೆಯಲ್ಲಿ ಎಂದಿಗೂ ಯಾವ ಹಬ್ಬದ ಸಮಯದಲ್ಲೂ ಸಮಸ್ಯೆಯಾಗಿಲ್ಲ. ಹಿಂದೂ-ಮುಸಲ್ಮಾನರು ಅಣ್ಣ-ತಮ್ಮದಿರಂತೆ ಒಂದೇ ತಾಯಿಯ ಮಕ್ಕಳಂತೆ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಒಮ್ಮೆ ಮಾತ್ರ ಗೊಂದಲದಿಂದ ಸ್ವಲ್ಪ ತೊಂದರೆಯಾಗಿದ್ದು, ಒಟ್ಟಿಗೆ ಅಂತಹ ಪರಿಸ್ಥಿತಿ ಮತ್ತೇ ಮರುಕಳಿಸಿಲ್ಲ. ಎಲ್ಲಾ ಧರ್ಮೀಯರು ಅವರವರ ಹಬ್ಬ ಆಚರಿಸಲು ಉಳಿದ ಧರ್ಮದವರ ಜೊತೆ ಸಹಕರಿಸುವ ಮೂಲಕ ದಾವಣಗೆರೆ ಭಾವೈಕ್ಯತೆ ನೆಲವಾಗಿದೆ.
ಭಾರತದ ಸಂವಿಧಾನದ ಆಶಯದಂತೆ ಎಲ್ಲರೂ ಕಾನೂನಿಗೆ ತಲೆಬಾಗಲೇ ಬೇಕಾಗಿದೆ. ಅಂತೆಯೇ ಉತ್ತಮ ನಾಗರೀಕರು ನಾವಾಗೋಣ ಎಂದರು.
ಜಿಲ್ಲೆಯಲ್ಲಿ ಸರಿ ಸುಮಾರು ೨ ಲಕ್ಷ ಮುಸಲ್ಮಾನರಿದ್ದು, ನಗರದ ನಾಲ್ಕು ಕಡೆಗಳಿಂದ ಮೆರವಣಿಗೆ ಬಂದು ೩ ರುದ್ರಭೂಮಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇಲಾಖೆಯೂ ಕೂಡ ಉತ್ತಮ ಸಹಕಾರ ನೀಡುತ್ತಿದೆ ಎಂದರು. ಅಂದು ಎಲ್ಲಾ ಮುಸಲ್ಮಾನ್ ಬಾಂಧವರು ಒಂದೆಡೆ ಸೇರಿ ನಾಡಿಗೆ ಒಳ್ಳೆಯ ಮಳೆ-ಬೆಳೆ ಆಗಲಿ ಎಂದು ಪ್ರಾರ್ಥಿಸುವುದರೊಂದಿಗೆ ತಪ್ಪು ಮಾಡಿದವರನ್ನು ಕ್ಷಮಿಸು ಎಂದು ಪ್ರಾರ್ಥಿಸಿಕೊಳ್ಳಲಾಗುತ್ತದೆ ಎಂದರು.
ಶ್ರೀರಾಮ ಸೇನೆಯ ಮುಖಂಡರಾದ ಸತೀಶ್ ಪೂಜಾರಿ ಮಾತನಾಡಿ ರಂಜಾನ್ ಶಾಂತಿಯುತವಾಗಿ ನಡೆಯಲಿ. ಧರ್ಮ ಎಂದರೆ ನ್ಯಾಯ, ನೀತಿ, ಸತ್ಯ ಧರ್ಮದಿಂದ ನಡೆದುಕೊಂಡರೆ ಯಾವುದೇ ಗೊಂದಲಗಳಾಗುವುದಿಲ್ಲ. ೧೯೯೧-೯೨ ರಲ್ಲಿ ಯಾವುದೇ ಗಲಾಟೆ ಆಗಿರಲಿಲ್ಲ. ಗಣೇಶ ಉತ್ಸವ ಸಮಿತಿ ಮತ್ತು ಪೊಲೀಸರ್ ನಡುವಿನ ಮಾತುಕತೆಯಲ್ಲಿ ಗೊಂದಲವಾಗಿತ್ತು. ವಿನಹ ಯಾವ ಧರ್ಮದವರೂ ಬಡಿದಾಡಿಕೊಂಡಿರಲಿಲ್ಲ. ಆ ವಿಚಾರಕ್ಕೆ ಅಷ್ಟೊಂದು ಮಹತ್ವ ಕೊಡುವುದು ಬೇಡ ಎಂದರು. ಯಾವುದೇ ಧರ್ಮಗಳ ಸಾರಾಂಶದ ಕೊನೆಯ ಸಾಲು ಮುಕ್ತಾಯವಾಗುವುದು ಶಾಂತಿ ನೆಲಸಲಿ ಎಂದು. ಹಾಗಾಗಿ ಈ ನೆಲದಲ್ಲಿ ರಾಮಾಯಣ, ಮಹಾಭಾರತ, ಕುರಾನ್, ಬೈಬಲ್, ಭಗವಧ್ಗೀತೆ ಎಲ್ಲದರಲ್ಲೂ ವಿಶೇಷವಿದೆ. ಯಾವುದು ಮೇಲಲ್ಲ, ಯಾವುದು ಕೀಳಲ್ಲ.
ಹಾಗಾಗಿ ಧರ್ಮಕ್ಕಿಂತ ಮೊದಲು ನಾವು ಭಾರತೀಯರಾಗೋಣ. ನೂರಾರು ವರ್ಷ ಪರಕೀಯರಿಂದ ಈ ದೇಶ ಆಳಿದರೂ ಇಂದಿಗೂ ಈ ನಾಡಿನಲ್ಲಿ ಸೌಹಾರ್ದತೆ ಇದೆ. ಅದು ಈ ನೆಲದ ಗುಣಕ್ಕಿರುವ ತಾಕತ್ತು. ಶಾಂತಿ ಕಾಪಾಡುವುದು ಪೊಲೀಸ್ ಇಲಾಖೆಯ ಕೆಲಸವಷ್ಟೇ ಅಲ್ಲ. ಅದು ನಾಗರೀಕರ ಜವಾಬ್ದಾರಿ. ಹಾಗಾಗಿ ಅಂದಿನ ಪ್ರಾರ್ಥನೆಯಲ್ಲಿ ಈ ದೇಶಕ್ಕೆ ಅನ್ನ ನೀಡುವ ರೈತನಿಗೆ, ದೇಶ ಕಾಯುವ ಸೈನಿಕನಿಗೆ ಹಾಗೂ ನಾಡಿಗೆ ಒಳ್ಳೇಯದಾಗಲಿ ಎಂದು ಪ್ರಾರ್ಥಿಸೋಣ ಎಂದರು.
ಜಿಲ್ಲಾ ವಕ್ಫ್ ಬೋರ್ಡ ಸಮಿತಿಯ ಅಧ್ಯಕ್ಷರಾದ ಸಿರಾಜ್ ಅವರು ಮಾತನಾಡಿ ಈ ತಿಂಗಳು ಮುಸಲ್ಮಾನ ಬಾಂಧವರಿಗೆ ಪವಿತ್ರವಾದ ತಿಂಗಳು. ಹಬ್ಬದಂದು ಜಿಲ್ಲಾಡಳಿತ ಮತ್ತು ಮಹಾನಗರೆ ಪಾಲಿಕೆ ಪಿ.ಬಿ ರಸ್ತೆಯಲ್ಲಿ ಸ್ವಚ್ಚತೆ, ನೀರಿನ ವ್ಯವಸ್ಥೆ ಮಾಡಬೇಕೆಂದರು. ಯಾವುದೇ ಅಹಿತಕರ ಘಟನೆಗೆ ಆಸ್ಫದ ನೀಡದಂತೆ ಉಭಯ ಧರ್ಮಗಳ ಮುಖಂಡರು ಸಹಕಾರ ನೀಡೋಣ. ಚಂದ್ರ ದರ್ಶನವಾದ ನಂತರ ಹಬ್ಬ ಆಚರಿಸಲಾಗುವುದು ಎಂದರು.
ಮುಖಂಡರಾದ ಅಮಾನುಲ್ಲಾ ಅವರು ಮಾತನಾಡಿ ಎಲ್ಲಾ ಹಬ್ಬಗಳಿಗೂ ಸೌಹಾರ್ದ ಸಭೆ ನಡೆಯುತ್ತಿದೆ. ಎಲ್ಲರಿಗೂ ಅವರದೇ ಆದ ಜವಾಬ್ದಾರಿ ಇರುತ್ತದೆ. ನಾವು ವ್ಯಕ್ತಪಡಿಸುವ ಭಾವನೆ, ಭಾಷಣ ಒಂದಾದರೆ ಯಾವುದೇ ಗೊಂದಲವಿರುವುದಿಲ್ಲ. ಆದರೆ ಮಾತನಾಡುವ ಮೊದಲು ಅದನ್ನು ಪಾಲಿಸಬೇಕು ಅಂದರು. ನಗರಪಾಲಿಕೆ ತುಂಬಾ ನಿಷ್ಕ್ರಿಯವಾಗಿದೆ. ಅಧಿಕಾರಿಗಳು ಸ್ವಲ್ಪ ಇತ್ತ ಗಮನ ಹರಿಸಿ ನೀರು, ವಿದ್ಯುತ್, ಸ್ವಚ್ಚತೆ, ಬಗ್ಗೆ ಗಮನ ಹರಿಸಬೇಕು ಎಂದರು.
ನಗರ ಡಿ.ಎಸ್.ಪಿ ಬಾಬು ಎಲ್ಲರನ್ನು ಸಭೆಗೆ ಸ್ವಾಗತಿಸಿ ತಮ್ಮ ಅಮೂಲ್ಯ ಸಲಹೆ ನೀಡುವ ಮೂಲಕ ಅಹಿತಕರ ಘಟನೆಗಳು ನಡೆಯದಂತೆ ಇಲಾಖೆಗೆ ಮುನ್ಸೂಚನೆ ನೀಡುವ ಮೂಲಕ ಸಹಕರಿಸಬೇಕು. ಈ ಹಿಂದಿನಂತೆ ಮುಂದಿನ ದಿನಗಳಲ್ಲಿ ಸಹಕಾರವಿರಲಿ ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್.ಜಿ.ಉಮೇಶ್, ಮುಖಂಡರಾದ ರಾಮಚಂದ್ರಪ್ಪ, ಸೈಯದ್ ರಫೀಕ್, ಸಲಾಂ ಸಾಬ್, ಸುಜಾತ, ವಿಕಾಸ್ ದೇವಕರ್, ಜಾಕಿರ್ ಹುಸೇನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಗ್ರಾಮಾಂತರ ಡಿವೈಎಸ್‌ಪಿ ಎಂ ಕೆ ಗಂಗಲ್, ಹರಪನಹಳ್ಳಿ ಡಿವೈಎಸ್‌ಪಿ ನಾಗೇಶ್ ಐತಾಳ್, ದಾವಣಗೆರೆ ತಹಶೀಲ್ದಾರ್ ಯರ್ರಿಸ್ವಾಮಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment on "‘ಹಬ್ಬಗಳ ಆಚರಣೆ ಸೌಹಾರ್ದದಿಂದಿರಲಿ’ : ಪೊಲೀಸ್ ವರಿಷ್ಟಾಧಿಕಾರಿ ಚೇತನ್"

Leave a comment

Your email address will not be published.


*