ಶಾಮನೂರು ಶಿವಶಂಕರಪ್ಪಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಪಾಲಿಕೆ ಸದಸ್ಯರುಗಳ ರಾಜೀನಾಮೆ

Share
  • 225
    Shares

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವರಾದ ಡಾ|| ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಕಲ್ಪಿಸದೇ ಇರುವುದನ್ನು ಖಂಡಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರುಗಳು ರಾಜೀನಾಮೆ ಸಲ್ಲಿಸಿದ್ದಾರೆ.
ಇಂದು ಮೈತ್ರಿ ಸರ್ಕಾರದ ಪ್ರಥಮ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾಗಿರುವ ಶಾಮನೂರು ಶಿವಶಂಕರಪ್ಪನವರಿಗೆ ಅವಕಾಶ ನೀಡದಿದೆ ಇದ್ದರಿಂದ ಇಂದು ತುರ್ತು ಸಭೆ ನಡೆಸಿದ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರುಗಳು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಾ|| ಜಿ.ಪರಮೇಶ್ವರ್ ಅವರಿಗೆ ರಾಜೀನಾಮೆ ರವಾನಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಪಾಲಿಕೆ ಸದಸ್ಯರೂ ಆಗಿರುವ ದಿನೇಶ್ ಕೆ.ಶೆಟ್ಟಿ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿದ್ದ ಶಾಮನೂರು ಶಿವಶಂಕರಪ್ಪನವರು ಒಮ್ಮೆ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೇ ೩-೪ ದಶಕಗಳ ಕಾಲ ಕೆಪಿಸಿಸಿ ಖಜಾಂಚಿ ಆಗಿದ್ದರು. ಇದರ ಜೊತೆಗೆ ಒಮ್ಮೆ ಸಂಸದರಾಗಿ ೫ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದು, ಕಳೆದ ಸಿದ್ದರಾಮಯ್ಯನವರ ಸಂಪುಟದಲ್ಲಿ ತೋಟಗಾರಿಕೆ ಮತ್ತು ಎಪಿಎಂಸಿ ಸಚಿವರಾಗಿ ಎಪಿಎಂಸಿಗಳಲ್ಲಿ ರೈತರಿಗೆ ಅನ್ಯಾಯವಾಗುವುದನ್ನು ತಡೆಯಲು ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಿದ್ದರು.
ಇಂತಹ ಜನಪರತೆಯನ್ನು ಹೊಂದಿದ್ದರಿಂದಲೇ ಶಾಮನೂರು ಶಿವಶಂಕರಪ್ಪನವರು ೫ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದು, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಡಾ|| ಶಾಮನೂರು ಶಿವಶಂಕರಪ್ಪನವರಿಗೆ ಈ ಬಾರಿ ಮೈತ್ರಿ ಸರ್ಕಾರದಲ್ಲಿ ಅವಕಾಶದ ಆಶಾಭಾವನೆ ಹೊತ್ತಿದ್ದ ನಮಗೆ ಪಕ್ಷದ ಹೈಕಮಾಂಡ್ ತೀರ್ಮಾನ ತೀವ್ರ ನೋವು ತಂದಿದ್ದರಿಂದ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಆರ್.ಎಸ್. ಶೇಖರಪ್ಪ, ಪಾಲಿಕೆ ಸದಸ್ಯರುಗಳಾದ ಶಿವನಳ್ಳಿ ರಮೇಶ್, ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಜ್ಜಂಪುರ ಮೃತ್ಯುಂಜಯ, ಅಯೂಬ್ ಪೈಲ್ವಾನ್ ಅವರು ತಿಳಿಸಿದ್ದಾರೆ.

Be the first to comment on "ಶಾಮನೂರು ಶಿವಶಂಕರಪ್ಪಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಪಾಲಿಕೆ ಸದಸ್ಯರುಗಳ ರಾಜೀನಾಮೆ"

Leave a comment

Your email address will not be published.


*