ಸ್ವಸ್ಥ – ಸದೃಢ ಆರೋಗ್ಯಕ್ಕೆ ಪ್ರತಿಯೊಬ್ಬರಿಗೂ ಯೋಗ ಅವಶ್ಯ : ಸಂಸದ ಜಿ .ಎಂ. ಸಿದ್ದೇಶ್ವರ್

Share
  • 42
    Shares

ದಾವಣಗೆರೆ -ಸ್ವಸ್ಥ ಮನಸ್ಸು ಮತ್ತು ಸದೃಢ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಯೋಗ ಅವಶ್ಯವೆಂದು ವಿಶ್ವಕ್ಕೇ ತೋರಿಸಿಕೊಟ್ಟವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ, ತಪೋವನ ಹಾಗೂ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಪತಂಜಲಿ ಯೋಗ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸೇವಾದಳ, ಎಎಫ್‌ಐ&ಎನ್‌ಐಎಂಎ, ಎನ್‌ಸಿಸಿ, ಎನ್‌ಎಸ್‌ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಇಲಾಖೆಗಳ ಸಹಯೋಗದಲ್ಲಿ ಇಂದು ಮೋತಿವೀರಪ್ಪ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ ೪ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಂತ ಪ್ರಾಚೀನವಾದ ಮತ್ತು ಉಪಯುಕ್ತವಾದ ಯೋಗವನ್ನು ಎಲ್ಲರಿಗೂ ಪರಿಚಯಿಸಬೇಕೆಂಬ ಉದ್ದೇಶದಿಂದ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವ ಯೋಗ ದಿನಾಚರಣೆ ಘೋಷಣೆಗೆ ಕಾರಣಕರ್ತರಾಗಿ ವಿಶ್ವಕ್ಕೇ ಯೋಗವನ್ನು ಪರಿಚಯಿಸಿದ್ದು, ಇಂದು ಅನೇಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ.
ಹಿಂದೆ ಪೂರ್ವಿಜರು ಅತ್ಯಂತ ಶ್ರಮಜೀವಿಗಳಾಗಿದ್ದು, ಬೆವರು ಸುರಿಸಿ ಕೆಲಸ ಮಾಡುತ್ತಿದ್ದರು. ಆ ಮೂಲಕ ಆರೋಗ್ಯವಂತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಮನುಷ್ಯ ಯಂತ್ರಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿ, ದೈಹಿಕ ಚಟುವಟಿಕೆ ಇಲ್ಲದೇ ಅನೇಕ ಕಾಯಿಲೆಗಳು ಮತ್ತು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇಂತಹ ದಿನಮಾನದ ಸಂದರ್ಭದಲ್ಲಿ ಯೋಗಾಭ್ಯಾಸವನ್ನು ದಿನನಿತ್ಯ ಮಾಡುವುದರಿಂದ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಾಭ್ಯಾಸ ಮಾಡಿ, ಸಧೃಡರಾಗಿರಬೇಕೆಂದು ಆಶಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಎ ರವೀಂದ್ರನಾಥ್ ಮಾತನಾಡಿ, ಯಾರು ನಿತ್ಯ ಬೆಳಿಗ್ಗೆ ೬ ಗಂಟೆಗೂ ಮುನ್ನ ಏಳುವರು ಅವರು ದೇವಮಾನವರು. ೬ ರಿಂದ ೭ ಗಂಟೆಯೊಳಗೆ ಏಳುವವರು ಮನುಷ್ಯರು, ೭ ಗಂಟೆಗೂ ಮೀರಿ ಏಳುವವರು ರಾಕ್ಷಸರು. ಯಾವ ಗುಂಪಿಗೆ ಸೇರುತ್ತೀರೋ ನೀವೇ ನಿರ್ಧರಿಸಿ ಎಂದ ಅವರು ಆರೋಗ್ಯವಂತರಾಗಿರಲು ಆದಷ್ಟು ಬೇಗ ಎದ್ದು ಯೋಗಾಭ್ಯಾಸ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆಂದರು.
ಬೆಳಿಗ್ಗೆ ೭ ರಿಂದ ೮.೪೫ ರವರೆಗೆ ಶಿಷ್ಟಾಚಾರದಂತೆ ಯೋಗ : ವೈದ್ಯಶ್ರೀ ಚನ್ನಬಸವಣ್ಣ ಯೋಗಾಭ್ಯಾಸ ನಡೆಸಿಕೊಟ್ಟರು. ಧ್ಯಾನ ಸಂಗಚಧ್ವಂ ಸಂವಧ್ವಂ ಸಂವೋ ಮನಾಂಸಿ ಜಾನತಾಮ್ ದೇವಾಭಾಗಂ ಯಥಾಪೂರ್ವೇ ಸಂಜಾನಾನಾ ಉಪಾಸತೆ ಎಂಬ ಯೋಗ ಪ್ರಾರ್ಥನೆಯೊಂದಿಗೆ ಶಿಷ್ಟಾಚಾರದಂತೆ ಬೆಳಿಗ್ಗೆ ೭ ರಿಂದ ಯೋಗಾಭ್ಯಾಸ ಆರಂಭವಾಯಿತು. ಮೊದಲಿಗೆ ಚಲನ ಕ್ರಿಯೆ, ಭುಜದ ವ್ಯಾಯಾನ, ನಂತರ ೨೫ ನಿಮಿಷಗಳ ಕಾಲ ೧೯ ಆಸನಗಳು ಹಾಗೂ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ನಂತರ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಳಿಸಲಾಯಿತು.

ಉಪನ್ಯಾಸ:
ಪ್ರೊ. ಕೃಷ್ಣೇಗೌಡ: ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸಿದ್ದ ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ ಮಾತನಾಡಿ, ಜೂನ್. ೨೧ ವಿಶೇಷ ದಿನವಾಗಿದ್ದು ಅತೀ ದೀರ್ಘವಾದ ದಿನ. ಇಂತಹ ದಿನ ಯೋಗ ದಿನಾಚರಣೆ ಆಚರಿಸುತ್ತಿರುವುದು ವಿಶೇಷ. ಕೈಗಾರಿಕೆ ಎಂದರೆ ನಾವೆಲ್ಲರೂ ಜಪಾನ್, ಜರ್ಮನ್‌ನಂತಹ ದೇಶದೆಡೆ ತಿರುಗಿ ನೋಡುತ್ತೇವೆ. ಅದೇ ಯೋಗ ಎಂದರೆ ಎಲ್ಲರೂ ಭಾರತದೆಡೆ ತಿರುಗಿ ನೋಡುತ್ತಾರೆ. ಯೋಗ ಭಾರತದ ಒಂದು ಪ್ರಾಚೀನ ಕ್ರಮವಾಗಿದೆ. ೨೦೧೪ ರ ನವೆಂಬರ್ ೨೭ ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವ ಯೋಗ ದಿನಾಚರಣೆಗೆ ಸಲ್ಲಿಸಿದ್ದ ಪ್ರಸ್ತಾವನೆ ಸರ್ವಾನುಮತದಿಂದ ಅಂಗೀಕರಿಸಲಾಗಿದ್ದು ಐತಿಹಾಸಿಕ ಘಟನೆ ಎಂದು ನೆನೆದರು.

ವೈದ್ಯಶ್ರೀ ಚನ್ನಬಸವಣ್ಣ: ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಹೇಳಿಕೊಟ್ಟ ವೈದ್ಯಶ್ರೀ ಚನ್ನಬಸವಣ್ಣ ಮಾತನಾಡಿ, ನಮ್ಮ ಒಳಗೆ ನಾವು ಪ್ರವೇಶ ಮಾಡುವುದೇ ಯೋಗ. ಯೋಗ ನೋವಿನಲ್ಲಿರುವವರ ಕಣ್ಣೀರನ್ನು ಒರೆಸುವುದು. ಬೇರೆಯವರ ಮನೆ ದೀಪ ಹಚ್ಚುವುದು. ಎಲ್ಲವನ್ನು ಪೂಜನೀಯವಾಗಿ ನೋಡುವುದೇ ಯೋಗಾಚರಣೆ. ಇಂದು ನಾವೆಲ್ಲಾ ಯೋಗ ಜೀವನ ನಡೆಸುವುದು ಅತ್ಯವಶ್ಯಕವಾಗಿದೆ. ಒಳ್ಳೆಯ ಆಹಾರ, ಉತ್ತಮ ಮಾತು, ಸತ್ಯತೆ, ಸನ್ನಡತೆ ಇತ್ಯಾದಿ ಇವೇ ಯೋಗ.
ದೇವರಿಗೆ ತಂದೆ ಇಲ್ಲ, ತಾಯಿ ಇಲ್ಲ, ದೇವ ಅಪರಿಮಿತ. ಯೋಗ-ಪ್ರಾಣಾಯಾಮ ನಿರತರಾದಾಗ ನಮ್ಮಲ್ಲಿ ಹರಿಯುವ ವಿಶ್ವಶಕ್ತಿಯೇ ದೇವರು. ಎಲ್ಲರಲ್ಲೂ ಈ ಶಕ್ತಿ ಇದೆ. ಎಲ್ಲರಲ್ಲೂ ದೇವರಿದ್ದಾನೆ. ಹಲವಾರು ಧರ್ಮದವರು ವಿಧ ವಿಧವಾಗಿ ಆರಾಧಿಸುತ್ತಾರೆ ಅಷ್ಟೆ. ಅದಕ್ಕೆ ಯೋಗಾಭ್ಯಾಸದಂತಹ ಕ್ರಮಗಳ ಮೂಲಕ ಚಾಲನೆ ನೀಡಬೇಕಷ್ಟೆ. ಎಲ್ಲರ ಹಸ್ತಕಮಲದಲ್ಲಿ ಹರಿಯುವ ಶಕ್ತಿಯೇ ದೇವರು ಅಭಿಪ್ರಾಯ ಪಟ್ಟರು.

ಇಂದಿನ ಯೋಗಾಭ್ಯಾಸದಲ್ಲಿ ಸಂಸದರು, ಜಿ ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾಧಿಕಾರಿ, ಅಧಿಕಾರಿ, ಯೋಗ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನ ಯೋಗಾಭ್ಯಾಸ ಮಾಡಿದರು. ಶಿಕ್ಷಣ ಮತ್ತು ಸಂಸ್ಕೃತಿ ವಿನಿಯಮ ಕಾರ್ಯಕ್ರಮದಡಿ ಯು ಕೆ(ಯುನೈಟೆಡ್ ಕಿಂಗ್‌ಡಮ್)ಯಿಂದ ಜಿಲ್ಲೆಗೆ ಆಗಮಿಸಿದ್ದ ಎಂಟು ವಿದ್ಯಾರ್ಥಿಗಳು ಇಂದಿನ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಯೋಗಾಭ್ಯಾಸ ಮಾಡಿದರು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಜಿ ಪಂ ಅಧ್ಯಕ್ಷೆ ಮಂಜುಳಾ ಟಿ ವಿ ರಾಜು, ಜಿ ಪಂ ಉಪಾಧ್ಯಕ್ಷೆ ಗೀತಾಗಂಗಾನಾಯ್ಕ, ಜಿ ಪಂ ಸದಸ್ಯೆ ಶೈಲಜಾ ಬಸವರಾಜ, ಪಾಲಿಕೆ ಸದಸ್ಯೆ ಅಶ್ವಿನಿ ಪ್ರಶಾಂತ್, ಡಿ ಸಿ ಉಮಾಪತಿ, ವೈದ್ಯಶ್ರೀ ಚನ್ನಬಸವಣ್ಣ, ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ, ಉಪವಿಭಾಗಾಧಿಕಾರಿಗಳಾದ ಡಾ.ಮಧು ಪಾಟಿಲ್, ಪ್ರಸನ್ನಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿದ್ದೇಶ್, ಡಾ. ಶಶಿಕುಮಾರ್, ಡಾ.ಗಂಗಾಧರ್ ವರ್ಮ, ಕರ್ನಲ್ ಸಿ ಎಂ ಬೋಪಣ್ಣ, ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಲೀಲಕ್ಕ, ಜಿಲ್ಲಾ ಯೋಗ ಒಕ್ಕೂಟದ, ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Be the first to comment on "ಸ್ವಸ್ಥ – ಸದೃಢ ಆರೋಗ್ಯಕ್ಕೆ ಪ್ರತಿಯೊಬ್ಬರಿಗೂ ಯೋಗ ಅವಶ್ಯ : ಸಂಸದ ಜಿ .ಎಂ. ಸಿದ್ದೇಶ್ವರ್"

Leave a comment

Your email address will not be published.


*