ಮೋತಿವೀರಪ್ಪ ಕಾಲೇಜು ಮೈದಾನದಲ್ಲಿ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

Share
  • 69
    Shares

ದಾವಣಗೆರೆ -ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್.೨೧ ರಂದು ನಗರದ ಮೋತಿವೀರಪ್ಪ ಕಾಲೇಜು ಆವರಣದಲ್ಲಿ ಬೆಳಿಗ್ಗೆ ೫ ರಿಂದ ೮.೪೫ ರವರೆಗೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹೇಳಿದರು.
೪ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಮಾಹಿತಿ ನೀಡಲು ಇಂದು ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಜೂನ್ ೨೧ ರಂದು ಬೆಳಿಗ್ಗೆ ೭ ರಿಂದ ೭.೪೫ ರವರೆಗೆ ಬೃಹತ್ ಯೋಗ ಪ್ರದರ್ಶನವಿರುತ್ತದೆ. ಬೆಳಿಗ್ಗೆ ೫ ರಿಂದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಧ್ಯಾನ ಕಾರ್ಯಕ್ರಮ ೬ ರಿಂದ ೭ ರವರೆಗೆ ‘ಯೋಗಾಯೋಗ ಸಂಗಮ’ ಎಂಬ ವೇದಿಕೆ ಕಾರ್ಯಕ್ರಮದಲ್ಲಿ ವೈದ್ಯಶ್ರೀ ಚನ್ನಬಸವಣ್ಣನವರು ಹಾಗೂ ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡರಿಂದ ಉಪನ್ಯಾಸವಿರುತ್ತದೆ ಎಂದರು.
ಯೋಗ ದಿನಾಚರಣೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ, ತಪೋವನ ಹಾಗೂ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಪತಂಜಲಿ ಯೋಗ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸೇವಾದಳ, ಎಎಫ್‌ಐ&ಎನ್‌ಐಎಂಎ, ಎನ್‌ಸಿಸಿ, ಎನ್‌ಎಸ್‌ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಇಲಾಖೆಗಳ ಸಹಯೋಗದಲ್ಲಿ ನಡೆಯಲಿದೆ.
ಜೂ.೧೩ ರಿಂದಲೇ ನಗರದ ಸುಮಾರು ೧೦೦ ಶಾಲಾ-ಕಾಲೇಜುಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ತಪೋವನ ಹಾಗೂ ವಿವಿಧ ಸಂಘ ಸಂಸ್ಥೆಗಳ ಯೋಗ ಶಿಕ್ಷಕರಿಂದ ಏರ್ಪಡಿಸುತ್ತಾ ಬರಲಾಗಿದೆ. ಜೂ. ೧೬ ರಂದು ದೇವರಾಜ್ ಅರಸ್ ಬಡಾವಣೆಯ ಲಯನ್ಸ್ ಸಮುದಾಯ ಭವನದಲ್ಲಿ ಬೆಳಿಗ್ಗೆ ೯ ರಿಂದ ವಿವಿಧ ವಯೋಮಾನದ ಮಕ್ಕಳು ಮತ್ತು ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಬೃಹತ್ ಯೋಗ ಜಾಥಾ: ಜೂ. ೧೭ ರಂದು ಯೋಗಾಸಕ್ತರು, ವಿವಿಧ ಸಂಘ ಸಂಸ್ಥೆಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಸಾರ್ವಜನಿಕರಿಂದ ಮೋತಿ ವೀರಪ್ಪ ಕಾಲೇಜಿನಿಂದ ಬೆಳಿಗ್ಗೆ ೭ ರಿಂದ ‘ನಮ್ಮ ನಡಿಗೆ ಆರೋಗ್ಯದೆಡೆಗೆ’ ಎಂಬ ಘೋಷವಾಕ್ಯದಡಿ ಬೃಹತ್ ಯೋಗ ಜಾಥಾವನ್ನು ಏರ್ಪಡಿಸಲಾಗಿದೆ. ಜಾಥಾ ಮೋತಿ ವೀರಪ್ಪ ಕಾಲೇಜಿನಿಂದ ಹೊರಟು ಗಾಂಧಿ ವೃತ್ತ, ವಿದ್ಯಾರ್ಥಿ ಭವನ ವೃತ್ತ, ಕೆಇಬಿ ವೃತ್ತ, ಜಯದೇವ ವೃತ್ತ, ಪಾಲಿಕೆ, ಪೂಜಾ ಹೋಟೆಲ್, ಎವಿಕೆ ಕಾಲೇಜು, ರಾಂ & ಕೋ ವೃತ್ತ, ಚರ್ಚ್ ರಸ್ತೆ ಮೂಲಕ ಸಾಗಿ ಮೋತಿ ವೀರಪ್ಪ ಕಾಲೇಜು ತಲುಪುವುದು. ಸುಮಾರು ೨೦೦೦ ಜನ ಭಾವವಹಿಸುವ ನಿರೀಕ್ಷೆ ಇದೆ.
ಜೂನ್ ೧೮ ರಂದು ಬೆಳಿಗ್ಗೆ ೯ ರಿಂದ ಶಿವಯೋಗಿ ಮಂದಿರದಲ್ಲಿ ವಿವಿಧ ವಯೋಮಾನದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸೈಕಲ್ ಜಾಥಾ: ಜೂನ್ ೧೯ ರಂದು ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಬೆಳಿಗ್ಗೆ ೭.೩೦ ರಿಂದ ಯೋಗ ಕುರಿತು ಅರಿವು ಮೂಡಿಸುವ ಸಲುವಾಗಿ ‘ಇಂಧನ ಉಳಿಸಿ-ಆರೋಗ್ಯ ಬೆಳೆಸಿ’ ಘೋಷವಾಕ್ಯದಡಿ ಸೈಕಲ್ ಜಾಥಾವನ್ನು ಏರ್ಪಡಿಸಲಾಗಿದೆ. ಈ ಜಾಥಾದಲ್ಲಿ ಪ್ರೌಢ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಳ್ಳುವರು. ಸೈಕಲ್ ಜಾಥಾ ಮೋತಿ ವೀರಪ್ಪ ಕಾಲೇಜಿನಿಂದ ಹೊರಟು ಗಾಂಧಿ ವೃತ್ತ, ವಿದ್ಯಾರ್ಥಿ ಭವನ ವೃತ್ತ, ಕೆಇಬಿ ಸರ್ಕಲ್, ಪಾಲಿಕೆ, ರೈಲ್ವೇ ಸ್ಟೇಷನ್ ಅಂಡ್‌ಪಾಸ್, ಕ್ಲಾಕ್ ಟವರ್, ಕಾಯಿ ಪೇಟೆ ಬಸವೇಶ್ವರ ಸರ್ಕಲ್, ಹೊಂಡ ವೃತ್ತ, ಶಿವಾಲಿ ಟಾಕಿಸ್, ಹೊಸ ಕೋರ್ಟ್, ಅರುಣ ಚಿತ್ರಮಂದಿರದ ಮೂಲಕ ಹಾದು ಮೋತಿ ವೀರಪ್ಪ ಕಾಲೇಜು ತಲುಪುವುದು.
ಬೃಹತ್ ಯೋಗ ಜಾಥಾ ಮತ್ತು ಮಾನವ ಸರಪಳಿ : ಜೂ. ೨೦ ರಂದು ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಯೋಗ ಕುರಿತು ಜಾಗೃತಿಗಾಗಿ ಶ್ರೀ ವಚನಾನಂದ ಸ್ವಾಮಿಗಳ ಸಾರಥ್ಯದಲ್ಲಿ ಸುಮಾರು ೩೦ ರಿಂದ ೩೫ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮಾನವ ಸರಪಳಿ ಹಾಗೂ ಮೈದಾನದ ಮಧ್ಯಭಾಗದಲ್ಲಿ ಎಲ್‌ಇಡಿ ಪರದೆಯ ಮುಖಾಂತರ ವಚಾನನಂದ ಸ್ವಾಮಿಗಳ ಯೋಗಾಭ್ಯಾಸವಿರುತ್ತದೆ.
ಜೂ.೨೧ ರಂದು ಬೆಳಿಗ್ಗೆ ೫ ರಿಂದ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಧ್ಯಾನ, ೬ ರಿಂದ ೭ ರವರೆಗೆ ವೈದ್ಯಶ್ರೀ ಚನ್ನಬಸವಣ್ಣ ಮತ್ತು ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡರಿಂದ ಕಾರ್ಯಕ್ರಮಗಳಿರುತ್ತವೆ. ೭ ರಿಂದ ೮.೪೫ ರವರೆಗೆ ಶಿಷ್ಟಾಚಾರದಂತೆ ಯೋಗ ದಿನಾಚರಣೆ ಕಾರ್ಯಕ್ರಮಗಳು ನಡೆಯಲಿವೆ. ಹಾಗೂ ಕಾಲೇಜು ಆವರಣದಲ್ಲಿ ರಕ್ತದಾನ ಶಿಬಿರವನ್ನೂ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಎಲ್ಲ ಸಂಘ ಸಂಸ್ಥೆಗಳು, ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಯೋಗ ಒಕ್ಕುಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್ ಮಾತನಾಡಿ, ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿರುವ ವಿವಿಧ ಕಾರ್ಯಕ್ರಮಗಳಿಗೆ ಎಲ್ಲ ಸಂಘ ಸಂಸ್ಥೆಗಳ ಮತ್ತು ವಿವಿಧ ಇಲಾಖೆಗಳ ಸಹಕಾರ ಉತ್ತಮವಾಗಿದ್ದು, ಎಲ್ಲರೂ ಸೇರಿ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕೆಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು ಸಿದ್ದೇಶ್ ಮಾತನಾಡಿ, ಈ ಬಾರಿ ಜಿಲ್ಲೆಯ ಎಲ್ಲ ಯೋಗ ಸಂಸ್ಥೆಗಳು ಬೇರೆಡೆ ಎಲ್ಲೂ ಪ್ರತ್ಯೇಕವಾಗಿ ಯೋಗ ದಿನಾಚರಣೆ ಆಚರಿಸದೇ ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.

Be the first to comment on "ಮೋತಿವೀರಪ್ಪ ಕಾಲೇಜು ಮೈದಾನದಲ್ಲಿ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ"

Leave a comment

Your email address will not be published.


*