ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನ ಸಂಪರ್ಕ ಸಭೆಗಳಾಗಲಿ :ಎಸ್ ಆರ್ ಉಮಾಶಂಕರ್

Share
  • 63
    Shares

ದಾವಣಗೆರೆ -ನೂತನ ಸರ್ಕಾರದ ಆಶಯದಂತೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನತಾದರ್ಶನ ಕಾರ್ಯಕ್ರಮಗಳನ್ನು ನಡೆಸುತ್ತಿರುವಂತೆ, ಜಿಲ್ಲಾಧಿಕಾರಿಗಳ ನೇತೃತ್ವವದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಇಂತಹ ಸಭೆಗಳಾದರೆ ಸಾಕಷ್ಟು ಅನುಕೂಲವಾಗುವುದು ಎಂದರು.
ಹಾಗೂ ಈಗಾಗಲೇ ಸ್ಥಾಪಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕಗಳು ನಿರ್ಮಾಣಗೊಂಡ ನಂತರ ಈ ನೀರನ್ನು ಕುಡಿಯುತ್ತಿರುವ ಜನರ ಆರೋಗ್ಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ವರದಿ ತಯಾರಿಸಿ ಘಟಕ ಸ್ಥಾಪಿಸುವುದಕ್ಕೂ ಮುನ್ನ ಮತ್ತು ನಂತರ ಆಗಿರುವ ಆರೋಗ್ಯದ ಬೆಳವಣಿಗೆಗಳ ಬಗೆಗೆ ವರದಿ ನೀಡಲು ಡಿಹೆಚ್‌ಓ ಗೆ ಸೂಚಿಸಿದರು.
ಕೃಷಿ ಇಲಾಖೆಯ ಪ್ರಗತಿ ವಿವರ ಪಡೆದ ಅವರು ಈ ಬಾರಿಯೇನಾದರು ಸೈನಿಕ ಹುಳುಗಳ ಬಾಧೆ ಇದ್ದರೆ ಹಾಗೂ ಈ ಹಿಂದಿನ ವರ್ಷ ಸೈನಿಕ ಹುಳುಗಳಿಂದ ಆಗಿದ್ದ ಹಾನಿಗೆ ಪರಿಹಾರ ವಿತರಿಸಿರುವ ಬಗೆಗೆ ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿ ಎಸ್ ರಮೇಶ್, ಕಳೆದ ವರ್ಷ ಸೈನಿಕ ಹುಳು ಕಾಟದಿಂದ ೫ ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದ್ದು ೪೦ ಕೋಟಿ ಪರಿಹಾರ ಕೇಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರದ ಶರಣಪ್ಪ ಬಿ ಮುದಗಲ್ ಮಾಹಿತಿ ನೀಡಿ, ದಾವಣಗೆರೆ ಜಿಲ್ಲೆಯಲ್ಲಿ ೨೦೧೮ ರ ಮುಂಗಾರಿನಲ್ಲಿ ೧೯ನೇ ಜೂನ್ ೨೦೧೮ ರವರೆಗೆ ಸರಾಸರಿ ವಾಡಿಕೆ ಮಳೆ ೧೫೬ ಮಿ.ಮಿ ಇದ್ದು, ೨೩೮ ಮಿ.ಮಿ ವಾಸ್ತವ ಆಗಿರುತ್ತದೆ. ಒಟ್ಟಾರೆ ಶೇ ೫೩ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಹೋಬಳಿವಾರು ಮತ್ತು ತಾಲ್ಲೂಕವಾರು ಅವಲೋಕಿಸಿದಾಗ ಎಲ್ಲಿಯೂ ಮಳೆ ಕೊರತೆಯಾಗಿರುವುದು ಕಂಡುಬಂದಿರುವುದಿಲ್ಲಾ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು ೩.೨೪ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಂಡಿದ್ದು, ಇಲ್ಲಿಯವರೆಗೆ ೧,೩೫,೬೬೬ ಹೆ. ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ.(ಶೇ ೪೨ ಬಿತ್ತನೆಯಾಗಿರುತ್ತದೆ.)
ದಾವಣಗೆರೆ ಚನ್ನಗಿರಿ ಮತ್ತು ಹರಿಹರ ತಾಲ್ಲೂಕುಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆ ಮತ್ತು ಭಾರಿ ಗಾಳಿಯಿಂದ ಬೇಸಿಗೆ ಭತ್ತದ ಬೆಳೆ ೧೩೧೦.೪ ಹೆಕ್ಟೇರ್ ಹಾನಿಗೊಳಪಟ್ಟಿದ್ದು ಅಂದಾಜು ರೂ.೧,೭೭೪೪ ಕೋಟಿ ಗಳಷ್ಟು ಹಾನಿಯಾಗಿರುತ್ತದೆ ಎಂದರು.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು ೧೪೫೬೩೭ ಮೆ.ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇರುತ್ತದೆ. ಜೂನ್ ಮಾಹೆಯ ಅಂತ್ಯದವರೆಗೆ ಬೇಡಿಕೆ ೭೧೫೯೦ ಮೆ.ಟನ್ ಇದ್ದು, ಇದರಲ್ಲಿ ೪೧೧೭೫ ಮೆ.ಟನ್ ರಸಗೊಬ್ಬರಗಳ ದಾಸ್ತಾನು ಲಭ್ಯವಿರುತ್ತದೆ. ಜೂನ್ ಮಾಹೆಯಲ್ಲಿ ೩೩೯೮೦ ಮೆ.ಟನ್ ರಸಗೊಬ್ಬರದ ಬೇಡಿಕೆ ಇರುತ್ತದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರದ ಕೊರೆತೆ ಇರುವುದಿಲ್ಲ.
ಮುಂಗಾರುನಲ್ಲಿ ಒಣ ಪ್ರದೇಶಗಳಾದ ಹರಪನಹಳ್ಳಿ, ಜಗಳೂರು ಮತ್ತು ಭಾಗಶಃ ದಾವಣಗೆರೆ ತಾಲ್ಲೂಕುಗಳಲ್ಲಿ ಚೆನ್ನಾಗಿ ಮಳೆಯಾಗಿರುವುದರಿಂದ ಡಿ.ಎ.ಪಿ ರಸಗೊಬ್ಬರದ ಬೇಡಿಕೆ ಹೆಚ್ಚಾಗುವ ಸಂಭವ ಇರುತ್ತದೆ ಎಂದರು.
ಮುಸುಕಿನ ಜೋಳ ೧೦೬೦೦ ಕ್ವಿಂಟಾಲ್, ಶೇಂಗಾ ೪೦೦೦ ಕ್ವಿಂಟಾಲ್ ಮತ್ತು ಇತರೆ ಬಿತ್ತನೆ ಬೀಜಗಳು ೨೦೦೦ ಕ್ವಿಂಟಾಲ್ ದಾಸ್ತಾನಿಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಯಾವುದೇ ರೀತಿಯ ಬಿತ್ತನೆ ಬೀಜಗಳ ಕೊರೆತೆ ಇರುವುದಿಲ್ಲಾ.
ಜಿಲ್ಲೆಯಲ್ಲಿ ಒಟ್ಟು ೨೪ ರೈತ ಸಂಪರ್ಕ ಕ್ರೇಂದ್ರಗಳಿದ್ದು, ಇದರ ಜೊತೆಯಲ್ಲಿ ೧೩ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಇತರ ೦೯ ಕೇಂದ್ರಗಳು ಒಟ್ಟಾರೆ ೪೬ ಕೇಂದ್ರಗಳ ಮುಖಾಂತರ ರೈತರ ಅನುಕೂಲಕ್ಕಾಗಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.
ಮುಂಗಾರು ಹಂಗಾಮಿನ ಪೂರ್ವದಲ್ಲಿ ‘ಕೃಷಿ ಅಭಿಯಾನ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುವುದರ ಮೂಲಕ ಬೆಳೆಗಳಿಗೆ ತಗುಲಬಹುದಾದ ಕೀಟ, ರೋಗ ಬಾಧೆ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಅಲ್ಲದೇ ಮಣ್ಣು ಮಾದರಿಯ ಸಂಗ್ರಹಣಾ, ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಏರ್ಪಡಿಸಿ ಭೂಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿ ಪ್ರಯತ್ನ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆಯ ಪ್ರಗತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಡಿ.ಪಿ.ಐ ಕೋದಂಡರಾಮ, ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.೬ ರಷ್ಟು ಹೆಚ್ಚಳವಾಗಿದೆ ಎಂದರು.
ಶೇ.೬ ಪ್ರಮಾಣ ಹೆಚ್ಚಳವಾಗಿದ್ದರೂ ಸ್ಥಾನದಲ್ಲಿ ೪ ಸ್ಥಾನ ಕುಸಿದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ೧೦ ರಿಂದ ೧೨ ನೇ ಸ್ಥಾನದೊಳಗೆ ಬರುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ದಾವಣಗೆರೆಗೆ ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ. ಶಿಕ್ಷಣ ಕಾಶಿ ಎಂದೇ ಪ್ರಸಿದ್ದವಾಗಿದೆ ಎಂದರು. ಆರ್.ಟಿ.ಇ ಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಡಿ.ಡಿ.ಪಿ.ಐ ತಿಳಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಕೇಂದ್ರ್ರೀಯ ವಿದ್ಯಾಲಯದ ಮಾದರಿಯಲ್ಲಿ ೧ ನೇ ತರಗತಿಯಿಂದ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಸಲು ಸರ್ಕಾರ ಪ್ರಯತ್ನಿಸುತ್ತದೆ ಎಂದು ಕಾರ್ಯದರ್ಶಿಗಳು ತಿಳಿಸಿದರು. ಹಾಗೂ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳು ಹೆಚ್ಚುವರಿಯಾಗಿದ್ದರೆ ಅಂಗನವಾಡಿಗಳಿಗೆ ಬಳಸಿಕೊಳ್ಳಿ ಎಂದರು.
ಪಶು ಸಂಗೋಪನೆ ಇಲಾಖಾಧಿಕಾರಿ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಟ್ಟಾರೆ ೪.೬೬ ಲಕ್ಷ ಪಶುಗಳಿದ್ದು, ಈ ಪೈಕಿ ೩.೯೭ ಲಕ್ಷ ಪಶುಗಳಿಗೆ ಕಾಲುಬಾಯಿ ಲಸಿಕೆಯನ್ನು ಹಾಕಲಾಗಿದೆ. ಈ ಪೈಕಿ ಒಂದು ಹಸು ಮೃತಪಟ್ಟಿದ್ದು ರೂ.೨೫ ಸಾವಿರ ಪರಿಹಾರ ನೀಡಲಾಗಿದೆ. ಮೇವಿನ ಲಭ್ಯತೆ ಸಮರ್ಪಕವಾಗಿದ್ದು, ಒಂದು ಜಾನುವಾರಿಗೆ ೫ ಕೆಜಿ ಒಣ ಹುಲ್ಲು ಅಥವಾ ೧೫ ಹಸಿ ಹುಲ್ಲಿನಂತೆ ೪,೭೮,೧೩೧ ಜಾನುವಾರುಗಳಿಗೆ ಒಂದು ವಾರಕ್ಕೆ ೧೬೭೩೪.೭೧ ಮೆ.ಟನ್ ಮೇವಿನ ಅವಶ್ಯಕತೆ ಇರುತ್ತದೆ. ೪.೧೮೧೮೩.೦೦ ಮೆ.ಟನ್ ಮೇವಿನ ಲಭ್ಯತೆ ಇದ್ದು, ೨೫ ವಾರದವರೆಗೆ ನಿಭಾಯಿಸಬಹುದಾಗಿದೆ ಎಂದರು.
ಆರೋಗ್ಯ ಇಲಾಖೆಯ ಪ್ರಗತಿ ವರದಿ ನೀಡಿದ ಡಿಹೆಚ್‌ಓ ಡಾ.ತ್ರಿಪುಲಾಂಭ ಮಾತನಾಡಿ, ಇತ್ತೀಚೆಗೆ ಮಳೆ ಬಿದ್ದ ಹಿನ್ನೆಲೆಯಲ್ಲಿ ಡೆಂಗ್ಯು ಪ್ರಕರಣಗಳು ವರದಿಯಾಗಿವೆ. ಇದರ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಗತಿ ವರದಿ ನೀಡಿ, ಮಾತೃಪೂರ್ಣ ಯೋಜನೆಯಡಿ ಶೇ. ೭೫ ರಷ್ಟು ಪ್ರಗತಿಯಾಗಿದೆ. ಕೇಂದ್ರ ಸರ್ಕಾರದ ಮಾತೃವಂದನ ಯೋಜನೆಯಡಿ ಮೊದಲ ಹೆರಿಗೆಗೆ ಮೂರು ಹಂತದಲ್ಲಿ ರೂ. ೬೦೦೦ ನೀಡಲಾಗುವುದು ಎಂದರು.
ಸಭೆಯಲ್ಲಿ ಜಿ ಪಂ ಅಧ್ಯಕ್ಷೆ ಮಂಜುಳ ಟಿ ವಿ ರಾಜು, ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಜಿಲ್ಲಾಧಿಕಾರಿ ಡಿ ಎಸ್ ರಮೇಶ್, ಜಿ ಪಂ ಸಿಇಓ ಎಸ್ ಅಶ್ವತಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Be the first to comment on "ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನ ಸಂಪರ್ಕ ಸಭೆಗಳಾಗಲಿ :ಎಸ್ ಆರ್ ಉಮಾಶಂಕರ್"

Leave a comment

Your email address will not be published.


*