ಚನ್ನಗಿರಿಯ ಕಂಚಿಗನಾಳ್ ಗ್ರಾಮಕ್ಕೆ ಹೊಸ ನ್ಯಾಯಬೆಲೆ ಅಂಗಡಿ : ಅರ್ಜಿ ಆಹ್ವಾನ

Share
  • 56
    Shares

ದಾವಣಗೆರೆ -ಜಿಲ್ಲೆಯ ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ಕಂಚಿಗನಾಳ್ ಗ್ರಾಮಕ್ಕೆ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕರ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಟಿಯಿಂದ ಈ ಗ್ರಾಮಕ್ಕೆ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿಗಳನ್ನು ಕರೆಯಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ ೩೦ ದಿನಗಳ ಒಳಗಾಗಿ ನಮೂನೆ ಎ ರಲ್ಲಿ ಹಿರಿಯ ಉಪ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ದಾವಣಗೆರೆ ಇವರಿಗೆ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆಯನ್ನು ಈ ಕಚೇರಿಯಿಂದ ಅಥವಾ ತಹಶೀಲ್ದಾರ್, ಚನ್ನಗಿರಿ ತಾಲ್ಲೂಕು ಕಚೇರಿ ಇಲ್ಲಿಂದ ಪಡೆಯಬಹುದು.
ಕಂಚಿಗನಾಳ್ ಗ್ರಾಮ ಕೇಂದ್ರಸ್ಥಾನವಾಗಿದ್ದು ಈ ಗ್ರಾಮಕ್ಕೆ ಮಹದೇವಪುರ, ಬೆಟ್ಟಕಡೂರು ಮತ್ತು ಹರಳಿಕಟ್ಟ ಗ್ರಾಮಗಳು ಸೇರ್ಪಡೆಗೊಳ್ಳುತ್ತವೆ. ಈ ಹೊಸ ನ್ಯಾಯಬೆಲೆ ಅಂಗಡಿಗೆ ೭೬ ಎಎವೈ(ಅಂತ್ಯೋದಯ), ೬೬೬ ಬಿಪಿಎಲ್(ಅಕ್ಷಯ), ೦೭ ಎಪಿಎಲ್ ಅಂದಾಜು ಒಟ್ಟು ೭೪೯ ಪಡಿತರ ಚೀಟಿಗಳನ್ನು ನಿಯೋಜಿಸಲಾಗುವುದು. ಒಂದು ತಿಂಗಳಿಗೆ ಪಡಿತರ ಎತ್ತುವಳಿಗೆ ಕನಿಷ್ಟ ೫೦,೦೦೦ ಬ್ಯಾಂಕ್ ಠೇವಣಿ ಮೊತ್ತ ಇರಿಸಬೇಕು.
ನ್ಯಾಯಬೆಲೆ ಅಂಗಡಿಯನ್ನು ಮಂಜೂರು ಮಾಡುವಾಗ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ(ನಿಯಂತ್ರಣ)(ತಿದ್ದುಪಡಿ) ಆದೇಶ ೨೦೧೮ ರಲ್ಲಿ ತಿಳಿಸಿರುವಂತೆ ಆದ್ಯತೆಗಳನ್ನು ಪರಿಗಣಿಸಲಾಗುವುದು.
ವಿವಿಧ ಸಹಕಾರ ಸಂಘಗಳು ಮತ್ತು ಇತರರು(ವಿಕಲಚೇತನ & ತೃತೀಯಲಿಂಗೀಯ) ಅರ್ಜಿ ಸಲ್ಲಿಸಬಹುದಾಗಿದ್ದು, ಸಹಕಾರ ಸಂಘಗಳು ಕನಿಷ್ಟ ೩ ವರ್ಷದ ಹಿಂದೆ ನೊಂದಾಯಿತವಾಗಿರಬೇಕು. ಎರಡು ವರ್ಷಗಳಿಂದ ಕನಿಷ್ಟ ರೂ. ಎರಡು ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
ಅರ್ಜಿದಾರರು ಅರ್ಜಿ ಜೊತೆ ನಿಗದಿಪಡಿಸಿರುವ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸ್ವೀಕೃತವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಖಾಸಗಿ ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment on "ಚನ್ನಗಿರಿಯ ಕಂಚಿಗನಾಳ್ ಗ್ರಾಮಕ್ಕೆ ಹೊಸ ನ್ಯಾಯಬೆಲೆ ಅಂಗಡಿ : ಅರ್ಜಿ ಆಹ್ವಾನ"

Leave a comment

Your email address will not be published.


*