ಸಾಹಸ ಕ್ರೀಡೆಗಳಿಂದ ವಿಶೇಷ ಸಾಧನೆಗೆ ಪ್ರೇರಣೆ- ಎನ್.ಕೆ ಕೊಟ್ರೇಶ್

Share
  • 10
    Shares

ದಾವಣಗೆರೆ-ಸಾಹಸ ಕ್ರೀಡೆಗಳು ನಮ್ಮೊಳಗಿನ ದುಗುಡ, ಆತಂಕ, ಅವ್ಯಕ್ತ ಭಯಾದಿಗಳನ್ನು ನಿವಾರಿಸಿ ವಿಶೇಷ ಸಾಧನೆಗೆ ಪ್ರೇರಣೆ ನೀಡಬಲ್ಲವು ಎಂದು ದಾವಣಗೆರೆ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ದಾವಣಗೆರೆಯ ಸಂಸ್ಥಾಪಕರು ಹಾಗೂ ಸಾಹಸ ಕ್ರೀಡಾ ತರಬೇತುದಾರರಾದ ಎನ್.ಕೆ ಕೊಟ್ರೇಶ್ ತಿಳಿಸಿದರು.
ತಾಲ್ಲೂಕಿನ ಗೋಪನಾಳು ಗ್ರಾಮದ ಸರ್ಕಾರಿ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಮಾಹಿತಿ ಕಾರ್ಯಾಗಾರದಲ್ಲಿ ಸಾಹಸ ಕ್ರೀಡೆಗಳ ಕುರಿತು ಮಾಹಿತಿ ನೀಡಿದ ಅವರು, ಕೈಲಾಗದ ಕೆಲಸವನ್ನು ಆತ್ಮವಿಶ್ವಾಸದ ಬಲದಿಂದ ಮಾಡಿ ತೋರಿಸುವುದೆ ಸಾಹಸ,ಮನೋಬಲ, ಆತ್ಮಬಲ, ಧೈರ್ಯದಿಂದ ಏನು ಬೇಕಾದರೂ ಸಾಧಿಸಬಹುದು. ಆದರೆ ಅತಿಯಾದ ಆತ್ಮವಿಶ್ವಾಸ ಅಪಾಯಕ್ಕೆ ದಾರಿ ಎಂಬ ಎಚ್ಚರಿಕೆಯೂ ನಮ್ಮಲ್ಲಿರಬೇಕು ಎಂದು ಕಿವಿಮಾತು ಹೇಳಿದರು.ಅತಿಯಾದ ವ್ಯಾಮೋಹ, ಮೌಢ್ಯ, ಪೂರ್ವಾಗ್ರಹ ಪೀಡಿತ ಮನೋಭಾವನೆಗಳು, ಆರ್ಥಿಕ ತೊಂದರೆ ಹಾಗೂ ನಕರಾತ್ಮಕ ಧೋರಣೆಗಳ ಕಾರಣಗಳಿಂದಾಗಿ ಭಾರತದಲ್ಲಿ ಸಾಹಸ ಕ್ರೀಡೆಗಳಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಹಣವಂತರು ಸಾಹಸ ಕ್ರೀಡೆಗಳಿಗೆ ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಿದೆ ಎಂದರು.ಭೂ, ಜಲ ಮತ್ತು ವಾಯು ಸಾಹಸಗಳ ಬಗ್ಗೆ ಅನೇಕ ವಿಡಿಯೋ ಕ್ಲಿಪ್ಪಿಂಗ್ಸ್‌ಗಳ ಮೂಲಕ ಮಾಹಿತಿ ನೀಡಿದ ಅವರು ಕೆಲ ಪ್ರಾತ್ಯಕ್ಷಿಕೆಗಳೊಂದಿಗೆ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಚಾರ್ಯರಾದ ವಿ.ಸಿ.ಅಂಜಿನಪ್ಪ ಮಾತನಾಡಿ, ಯಾವುದೇ ಶುಲ್ಕ ಬಯಸದೆ ಹಾಗೂ ಒಂದು ದಿನದ ದುಡಿಮೆ ಕೂಡ ಬದಿಗೊತ್ತಿ ಸೇವಾಭಾವದಿಂದ ನಮ್ಮಂತಹ ಸರ್ಕಾರಿ ಶಾಲೆಗೆ ಆಗಮಿಸಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಕೊಟ್ರೇಶ್‌ರಂತಹ ವ್ಯಕ್ತಿಗಳು ಅಪರೂಪ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿರೇಂದ್ರ ಪಟೇಲ್, ದೊಡ್ಡಪ್ಪ, ನಿಂಗಪ್ಪ, ತಿಮ್ಮೇಶ್, ಮಾಜನ್ ಬಿ, ಸುಮ, ಮಧುಮತಿ, ವಿಜಯಕುಮಾರಿ, ಮಲ್ಲಿಕ್, ಮಂಜು ಚಿರಾಗ್ ಸೇರಿದಂತೆ ಇತರರು ಹಾಜರಿದ್ದರು.

Be the first to comment on "ಸಾಹಸ ಕ್ರೀಡೆಗಳಿಂದ ವಿಶೇಷ ಸಾಧನೆಗೆ ಪ್ರೇರಣೆ- ಎನ್.ಕೆ ಕೊಟ್ರೇಶ್"

Leave a comment

Your email address will not be published.


*