ಕಬ್ಬ-ಹಬ್ಬದ ದಂದಣ ದತ್ತಣ ಗೋಷ್ಠಿಯಲ್ಲಿ ಹಾಡಿ ನಲಿದ ಸಿದ್ದಗಂಗಾ ಶಾಲಾ ಎಳೆಗಿಳಿಕೋಗಿಲೆಗಳು

Share
  • 41
    Shares

ದಾವಣಗೆರೆ -ವಿದ್ಯಾನಗರದ ಕಾವ್ಯಮಂಟಪ ಉದ್ಯಾನವನದಲ್ಲಿ ಗ್ರಂಥಸರಸ್ವತಿ ಪ್ರತಿಭಾರಂಗ ನಡೆಸುವ “ಕನ್ನಡಕಬ್ಬ ಉಗಾದಿಹಬ್ಬ” ಕಾರ್ಯಕ್ರಮದಡಿಯಲ್ಲಿ ವಿಶಿಷ್ಟವಾದ “ದಂದಣ-ದತ್ತಣ ಗೋಷ್ಟಿ” ಶುಭಾರಂಭವಾಯಿತು.
ಇಲ್ಲಿನ ಸಿದ್ದಗಂಗಾ ವಿದ್ಯಾಸಂಸ್ಥೆಯ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಮಕ್ಕಳು ತಮ್ಮ ಕನ್ನಡ ಪಠ್ಯದ ಮೊದಲ ಪದ್ಯಗಳನ್ನು ಎಳೆಗಿಳಿಕೋಗಿಲೆಗಳಂತೆ ಶುಸ್ರಾವ್ಯವಾಗಿ ಹಾಡಿ, ಭಾವಪೂರ್ಣವಾಗಿ ಓದಿ, ಅರ್ಥಪೂರ್ಣವಾಗಿ ವಿಶ್ಲೇಷಿಸಿ ಕೇಳುಗರ ಮನದಣಿಸಿದರು.


ರಾಷ್ಟ್ರಕವಿ ಎಂ. ಗೋವಿಂದ ಪೈ ಅವರ ಎಂಟನೇ ತರಗತಿಯ “ಕನ್ನಡ ತಾಯಿ” ಪದ್ಯವನ್ನು ತುಷಿತಾ ಎಸ್., ಪೂರ್ವಿಕಾ. ಎಂ. ಎ., ಲಿಖಿತಾ. ಡಿ. ಬಿ., ಒಂಭತ್ತನೆಯ ತರಗತಿಯ ಕೈಯ್ಯಾರ ಕಿಞ್ಞಣ್ಣ ರೈ ಅವರ “ಹೊಸಹಾಡು” ಪದ್ಯವನ್ನು ಮೇಘನಾ. ಕೆ. ಆರ್., ಲಲಿತ, ತೇಜಸ್ವಿನಿ ಎಸ್., ಹತ್ತನೆಯ ತರಗತಿಯ ರಾಷ್ಟ್ರಕವಿ ಡಾ. ಜಿ . ಎಸ್. ಶಿವರುದ್ರಪ್ಪನವರ “ಸಂಕಲ್ಪಗೀತೆ” ಪದ್ಯವನ್ನು ಖುಷಿ. ಡಿ.ಎನ್., ಸ್ಫೂರ್ತಿ. ಎಂ. ಬಿ., ಪೂಜಾಮಂಜರಿ ಜಿ.ಎ., ಪ್ರಥಮ ಪಿ.ಯು.ಸಿ. ರನ್ನಮಹಾಕವಿಯ “ದುರ್ಯೋಧನ ವಿಲಾಪ” ಕಾವ್ಯವನ್ನು ಕರುಣ ಕನ್ನವರ, ನಿಖಿತಾ. ಎಸ್. ಬಿ., ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ವಿಶ್ವಂಭರ ಆರ್. ಭಾಗವತ್ , ನಾಗೇಶ್ ಎಂ. ವಿ. ಪ್ರಸ್ತುತಪಡಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಜಸ್ಟಿನ್ ಡಿಸೋಜ ಶಿವಣ್ಣನವರು ಮಾತನಾಡಿ ‘ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಪ್ರೋತ್ಸಾಯಿಸುತ್ತಾ ಬರುತ್ತಿರುವ ಗ್ರಂಥಸರಸ್ವತಿ ಪ್ರತಿಭಾರಂಗವು ಈ ವಿನೂತನ ‘ದಂದಣ-ದತ್ತಣ ಗೋಷ್ಟಿ’ ಕಾರ್ಯಕ್ರಮ ನಡೆಸುವ ಮೂಲಕ ತನ್ನ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ.


ಸಿರಿಗೆರೆ ಹಿರಿಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಐವತ್ತು ವರ್ಷಗಳ ಹಿಂದೆ ತಮ್ಮ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಈ ದಂದಣ ದತ್ತಣ ಗೋಷ್ಠಿ ಕಾರ್ಯಕ್ರಮ ಆರಂಭಿಸಿದ್ದರು. ಈಗಲೂ ಅಲ್ಲಿ ಇದನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಇದೀಗ ಶಿವಕುಮಾರ ಸ್ವಾಮಿ ಕುರ್ಕಿಯವರು ತಮ್ಮ ಗ್ರಂಥಸರಸ್ವತಿಯ ಮೂಲಕ ಇದನ್ನು ಸಾರ್ವಜನಿಕವಾಗಿ ಎಲ್ಲಾ ಶಾಲಾ ಮಕ್ಕಳೂ ಭಾಗವಹಿಸಲು ಅವಕಾಶವಾಗುವಂತೆ ಮಾಡಿರುವುದು ಎಲ್ಲರೂ ಮೆಚ್ಚಬಹುದಾದ ಕಾರ್ಯ’ ಎಂದು ತಿಳಿಸಿದರು.
ಅಲ್ಲದೆ ತಮ್ಮ ಸಂಸ್ಥೆಯ ವತಿಯಿಂದ ಕುರ್ಕಿ ದಂಪತಿಗಳಿಗೆ ಮೈಸೂರು ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ, ಏಲಕ್ಕಿ ಹಾರವನ್ನು ಹಾಕಿ ಸನ್ಮಾನ ಮಾಡಿದರು.
ವೇದಿಕೆಯ ಮೇಲೆ ವಿಶ್ರಾಂತ ಶಿಕ್ಷಕರುಗಳಾದ ಚಂದ್ರಶೇಖರಪ್ಪ ಹಾಗೂ ಕೆಂಚನಗೌಡರು ಉಪಸ್ಥಿತರಿದ್ದರು. ಗ್ರಂಥಸರಸ್ವತಿ ಶಿವಕುಮಾರಸ್ವಾಮಿ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು.ವಚನಗಾಯನವನ್ನು ಸ್ವರ್ಣಗೌರಿ ಕುರ್ಕಿ ಹಾಗೂ ಪಾರ್ವತಮ್ಮನವರು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಐಶ್ವರ್ಯ ಕುರ್ಕಿ ನೆರವೇರಿಸಿದರು.

Be the first to comment on "ಕಬ್ಬ-ಹಬ್ಬದ ದಂದಣ ದತ್ತಣ ಗೋಷ್ಠಿಯಲ್ಲಿ ಹಾಡಿ ನಲಿದ ಸಿದ್ದಗಂಗಾ ಶಾಲಾ ಎಳೆಗಿಳಿಕೋಗಿಲೆಗಳು"

Leave a comment

Your email address will not be published.


*