ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

Share
  • 43
    Shares

ದಾವಣಗೆರೆ -ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜುಳಾ ಟಿ ವಿ ರಾಜು ಇವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ ಜರುಗಿತು.
ಹಿಂದಿನ ಸಭೆಯ ನಂತರದಿಂದ ವಿವಿಧ ಇಲಾಖೆಗಳಲ್ಲಾಗಿರುವ ಪ್ರಗತಿ ಪರಿಶೀಲನೆ ನಡೆಸಲಾಯಿತು. ಆರೋಗ್ಯ ಇಲಾಖೆ ಚರ್ಚೆಯಲ್ಲಿ ಸಭೆಗೆ ಮಾಹಿತಿ ನೀಡಿದ ಡಿಹೆಚ್‌ಓ ಡಾ. ತ್ರಿಪುಲಾಂಬ, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳಿದ್ದಾರೆ. ತಜ್ಞ ವೈದ್ಯರುಗಳ ಕೊರತೆ ಇದೆ. ಅಲಗಿಲವಾಡ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ವೈದ್ಯರು ಲಭ್ಯವಿಲ್ಲದ ಕಾರಣ ಆಯುಷ್ ವೈದ್ಯರನ್ನು ನಿಯೋಜಿಸಲಾಗಿದೆ. ೨೦೧೮ ರ ಸಾಲಿನಲ್ಲಿ ೫೯ ಡೆಂಗ್ಯು ಪ್ರಕರಣಗಳು ವರದಿಯಾಗಿವೆ. ಹಾಗೂ ೭೨ ಚಿಕೂನ್‌ಗುನ್ಯ, ೧೯ ಜಪಾನಿಸ್ ಎನ್‌ಸಫಲೈಟಿಸ್ ಪ್ರಕರಣಗಳು ಪತ್ತೆಯಾಗಿದ್ದು, ಯಾವುದೇ ಸಾವುಗಳಾಗಿಲ್ಲ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ ಎಂದರು.
ಜಿ.ಪಂ.ಅಧ್ಯಕ್ಷರು ಮಾತನಾಡಿ, ಇತ್ತೀಚೆಗೆ ಬಹಳಷ್ಟು ಮಂದಿ ಮೊಣಕಾಲು ನೋವು ಎಂದು ಹೇಳುತ್ತಾರೆ. ಈ ಕಾಯಿಲೆಗೆ ಯಾವುದಾದರೂ ಔಷಧ ಲಭ್ಯವಿದೆಯಾ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್‌ಓ ಇದೊಂದು ವೈರಸ್‌ನಿಂದ ಬರುವ ಕಾಯಿಲೆಯಾಗಿದ್ದು ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲ. ಸ್ಥೂಲಕಾಯದವರಲ್ಲಿ ಈ ಸಮಸ್ಯೆ ಹೆಚ್ಚು ಎಂದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಮಾತನಾಡಿ ಜಗಳೂರು ತಾಲ್ಲೂಕು ಕೇಂದ್ರದಲ್ಲಿ ವೈದ್ಯರುಗಳ ಕೊರತೆ ಇದೆ. ಸಣ್ಣಪುಟ್ಟ ಕಾಯಿಲೆಗಳಿಗೂ ದಾವಣಗೆರೆಗೆ ಕಳುಹಿಸುತ್ತಾರೆ. ಯಾವುದೇ ಔಷಧಿ ಕೇಳಿದರೂ ಸ್ಟಾಕ್ ಇಲ್ಲ ಎನ್ನುತ್ತಾರೆ. ಹಾಗೂ ಈ ಹಿಂದೆ ಇಂಜೆಕ್ಷನ್‌ಗೆ ರೂ. ೨೦ ತೆಗೆದುಕೊಳ್ಳುತ್ತಿದ್ದರು ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್‌ಓ ಸಾಕಷ್ಟು ಪ್ರಮಾಣದ ಔಷಧಿ ಲಭ್ಯವಿದೆ. ಈ ಕುರಿತು ನಿರ್ದೇಶನ ನೀಡಲಾಗುವುದು. ಹಾಗೂ ಈ ಹಿಂದೆ ಇದ್ದ ಸಿಬ್ಬಂದಿ ಬದಲಾವಣೆ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿ.ಪಂ. ಉಪಾಧ್ಯಕ್ಷರಾದ ಗೀತಾ ಗಂಗಾನಾಯ್ಕ ಮಾತನಾಡಿ, ಮಾರ್ಕೆಟ್ ಬಳಿಯಿರುವ ಹೆರಿಗೆ ಆಸ್ಪತ್ರೆಯಲ್ಲಿ ನೀರು ಮತ್ತು ಸ್ವಚ್ಚತೆ ಯಾವುದೂ ಇಲ್ಲ. ನಾನೇ ಖುದ್ದಾಗಿ ಭೇಟಿ ನೀಡಿದ್ದೇನೆ ಎಂದರು. ಡಿಹೆಚ್‌ಓ ಆಸ್ಪತ್ರೆಯ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ.ಸಿಇಓ ಎಸ್ ಅಶ್ವತಿ, ಜಿ ಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಮುಖ್ಯ ಯೋಜನಾಧಿಕಾರಿ ಬಸನಗೌಡ, ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Be the first to comment on "ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ"

Leave a comment

Your email address will not be published.


*