ಜಾನಪದ ಕಲೆಗಳು ಕರ್ಣಾನಂದವನ್ನು ನೀಡುವಂಥಹವು : ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Share
  • 52
    Shares

ಸಾಣೇಹಳ್ಳಿ- ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ದಂದಣ-ದತ್ತಣ ಗೋಷ್ಠಿಯಡಿ ಆಯೋಜನೆಗೊಂಡಿದ್ದ `ಜಾನಪದ ಕಲೆಗಳು’ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಜಾನಪದ ಸಂಸ್ಕೃತಿ ಶ್ರೀಮಂತ ಸಂಸ್ಕೃತಿ. ಇಂದು ಇಲ್ಲಿ ಜಾನಪದ ಸಂಸ್ಕೃತಿಯ ಮೇಳವೇ ನಡೆದಂತೆ ಭಾಸವಾಯಿತು. ಜನಪದರ ವೇದಿಕೆಗಳು ಬಹಿರಂಗದವು. ಅವರು ಯಾವುದನ್ನು ಮುಚ್ಚುಮರೆಯಿಲ್ಲದೆ ತಮ್ಮ ಇಡೀ ಅಂತರಂಗವನ್ನು ಬಿಚ್ಚಿ ಹೇಳುವವರು. ಇಂಥ ಹೃದಯ ಶ್ರೀಮಂತಿಕೆಯುಳ್ಳ ಜಾನಪದ ಸಂಸ್ಕೃತಿ ಇಂದು ಕಾಣೆಯಾಗುತ್ತಿರುವುದು ಸಂಸ್ಕೃತಿಯೇ ಮರೆಯಾದಂತಾಗಿದೆ. ಇದಕ್ಕೆ ಕಾರಣ ಜನ ಇಂದು ನಾಗರೀಕತೆಯ ಮುಖವಾಡ ಹಾಕಿ ಹಣದ ಬೆನ್ನು ಹತ್ತಿರುವುದು. ವೈವಿಧ್ಯಮಯವಾದ ಬೆಳೆಗಳನ್ನು ರೈತರು ಬೆಳೆಯುತ್ತಿಲ್ಲ ಹಾಗಾಗಿ ಸುಗ್ಗಿಹಬ್ಬಗಳಿಲ್ಲ. ಜೊತೆಗೆ ಇಂದಿನ ಕಿರಿಯರಲ್ಲಿ ಹಿರಿಯರ ಸಂಪ್ರದಾಯಗಳ ಬಗ್ಗೆ ಅನಾದರ ತಳೆದಿರುವುದು ದುರದೃಷ್ಟಕರ ಸಂಗತಿ. ನಾಗರಿಕ ಲೋಕ ಜಾನಪದ ಲೋಕವನ್ನು ಹಾಳುಗೆಡುವಿದೆ. ಸಾಣೇಹಳ್ಳಿಯ ಮಕ್ಕಳಿಗೆ ಜಾನಪದ ಕಲೆಗಳ ತರಬೇತಿ ನೀಡುವ ಕೆಲಸವನ್ನು ಮಾಡಲಾಗುವುದು. ಜಾನಪದ ಕಲೆಗಳು ಕರ್ಣಾನಂದವನ್ನು ನೀಡುವಂಥಹವು. ಜನಪದ ಸಂಸ್ಕೃತಿಯಿಂದ ನಾಡಿನಲ್ಲಿರುವ ಭ್ರಷ್ಟಾಚಾರ, ಜಾತೀಯತೆ, ಅತ್ಯಾಚಾರ, ಮೇಲು-ಕೀಳು ಮುಂತಾದ ಅನಿಷ್ಟಗಳನ್ನು ನಿವಾರಿಸಲು ಸಾಧ್ಯ. ವಿಭಿನ್ನ ಜಾತಿ, ಮತ, ಧರ್ಮ, ಭಾಷೆ, ಹಿರಿ-ಕಿರಿಯ ಮುಂತಾದವುಗಳ ಹಂಗನ್ನು ಮೀರಿದಂತೆ ಭಾವಕ್ಯತೆಯನ್ನು ಜನಪದ ಕಲೆಗಳು ಬೆಳೆಸುವವು. ಸುಸಂಸ್ಕೃತ ಜೀವನಕ್ಕೆ ನಾಂದಿಯಾಡುವಂಥದ್ದು ಜಾನಪದ ಕಲೆಗಳು. ಇವುಗಳನ್ನು ಉಳಿಸಿ ಬೆಳೆಸುವಲ್ಲಿ ಮಕ್ಕಳು ಮತ್ತು ಅಧ್ಯಾಪಕರು ಬದ್ಧತೆ ತೋರಬೇಕು ಎಂದರು.


ಮುಖ್ಯ ಅತಿಥಿಗಳಾದ ಕಡೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಪ್ರಧಾನ ಸಂಚಾಲಕರಾದ ಗಂಗಾಧರ ಶಿವಪುರ ಸ್ವತಃ ವೀರಗಾಸೆ ಸಮಾಳವನ್ನು ನುಡಿಸಿದ ನಂತರ ಮಾತನಾಡಿ ಜಾನಪದ ಲೋಕ ವಿಶಿಷ್ಟ ಮತ್ತು ವಿಭಿನ್ನವಾದುದು. ಇವುಗಳಲ್ಲಿ ಹಾಡು, ನೃತ್ಯ, ಸಾಹಿತ್ಯ, ಕಿವಿಮಾತು, ಎಚ್ಚರಿಕೆ, ಗಾದೆ, ಒಗಟು, ಕತೆ ಮುಂತಾದ ನಾನಾ ಕಲಾ ಪ್ರಕಾರಗಳನ್ನು ಒಳಗೊಂಡಿವೆ. ಇವು ನೋಡಿ ನೋಡಿ, ಮಾಡಿ ಮಾಡಿ ಕಲಿಯುವಂಥವು. ಪುರುಷ ಪ್ರಧಾನವಾಗಿದ್ದ ವೀರಗಾಸೆ, ಡೊಳ್ಳು ಮುಂತಾದ ಗಂಡು ಕಲೆಗಳನ್ನು ಈಗ ಮಹಿಳೆಯರೂ ಲೀಲಾಜಾಲವಾಗಿ ಅಭಿನಯಿಸಬಲ್ಲರು. ಹೆಣ್ಣು-ಗಂಡೆಂಬ ಬೇಧಭಾವವಿಲ್ಲದೆ ಜಾನಪದ ಕಲೆಗಳನ್ನು ಯಾರುಬೇಕಾದರೂ ಕಲಿಯಬಹುದು. ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಜಾನಪದ ಕಲೆಗಳು ಒಳ್ಳೆಯ ವೇದಿಕೆಯನ್ನೊದಗಿಸುತ್ತವೆ. ಇವುಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಶಾಲಾ ಕಾಲೇಜುಗಳಲ್ಲಿಯೂ ಕಲಿಸುವಂತಾಗಬೇಕು ಎಂದರು.
ವಿದ್ಯಾರ್ಥಿ ಭಾಷಣಕಾರರಾದ ಜಾನ್ಹವಿ ಎಸ್ ಗೌಡ – ಜಾನಪದದ ಅರ್ಥ, ಅರ್ಪಿತ ಡಿ ಕೆ – ಕೋಲಾಟ ಮತ್ತು ಸುಗ್ಗಿಕುಣಿತ, ಆದಿತ್ಯ ಸಿ ಎಂ – ದೊಡ್ಡಾಟ ಮತ್ತು ಕಂಸಾಳೆ, ರಚನಾ ಎ ಎಸ್ – ಡೊಳ್ಳು ಕುಣಿತ ಮತ್ತು ಪಟ ಕುಣಿತ, ಮಲ್ಲಿಕಾ ಎಸ್ ಎನ್ – ಭಜನೆ ಮತ್ತು ಸೋಬಾನೆ ಕುರಿತಂತೆ ಪ್ರತ್ಯಕ್ಷಿಕೆ ಮತ್ತು ವಿಡಿಯೋ ತುಣುಕುಗಳನ್ನು ಬಳಸಿ ಮಾತನಾಡಿದರು.

ಆರಂಭದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಸಂಗೀತ ಶಾಲೆಯ ಅಧ್ಯಾಪಕ ಹೆಚ್ ಎಸ್ ನಾಗರಾಜ್ ಮತ್ತು ಶಾಲೆಯ ಮಕ್ಕಳು ವಚನಗೀತೆ ಮತ್ತು ಜಾನಪದಗೀತೆಗಳನ್ನು ನಡೆಸಿಕೊಟ್ಟರು. ಇಂಚರ ಎಸ್ ಜೆ ಅತಿಥಿ ಪರಿಚಯ ಮಾಡಿಕೊಟ್ಟರು. ವಿಕಾಸ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಶ್ನೋತ್ತರದಲ್ಲಿ ಭಾಗವಹಿಸಿದರು. ಸುಪ್ರಭೆ ಡಿ ಎಸ್ ಮತ್ತು ಹಿಮಶ್ರೀ ಎಸ್ ಕಾರ್ಯಕ್ರಮ ನಿರೂಪಿಸಿದರು. ತೇಜಸ್ ಎಸ್ ಪಿ ವಂದಿಸಿದರು.
ವಿದ್ಯಾರ್ಥಿಗಳು `ಘಲ್ಲು ಘಲ್ಲು ಎನುತಾವ್’, `ಸುಗ್ಗಿ ಕಾಲ ಹಿಗ್ಗಿ ಬಂದಿತೋ’, `ಕೋಲು ಕುಣಿತವೇ’ ಜಾನಪದ ಗೀತೆಗಳಿಗೆ ಆಕರ್ಷಕ ನೃತ್ಯನೀಡಿದರು. ವಿದ್ಯಾರ್ಥಿಗಳು ತಾಳ ಹಿಡಿದು ಭಜನಾ ಗೀತೆಯನ್ನು, ವಿದ್ಯಾರ್ಥಿನಿಯರು ಹೆಂಗಳೆಯರ ಪೋಷಾಕಿನೊಂದಿಗೆ ಸೋಬಾನೆ ಗೀತೆ ಹಾಡಿದರು. ವಿದ್ಯಾರ್ಥಿಗಳು ವೀರಗಚ್ಚೆ ಹಾಕಿ ವೀರಗಾಸೆ ಕುಣಿದರು. ಇಡೀ ವೇದಿಕೆಯನ್ನು ರಾಶಿಕಾಳು, ಒಡೇವು, ಬಸವಣ್ಣ, ಹಿಂದಿನ ಕಾಲಕ ಮನೆ, ಮಾವಿನ ತೋರಣ ಮುಂತಾದವುಗಳಿಂದ ಜಾನಪದ ಸೊಗಡು ಸೂಸುವಂತೆ ಅಲಂಕರಿಸಿದ್ದು ವಿಶೇಷವಾಗಿತ್ತು. ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗೋಷ್ಠಿಯನ್ನು ನಡೆಸಿಕೊಟ್ಟರು.

Be the first to comment on "ಜಾನಪದ ಕಲೆಗಳು ಕರ್ಣಾನಂದವನ್ನು ನೀಡುವಂಥಹವು : ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ"

Leave a comment

Your email address will not be published.


*