ಜುಂಜೇಶ್ವರ ದೇವರ ಜಾತ್ರಾ ಮಹೋತ್ಸವ

Share
  • 140
    Shares

ಹರಪನಹಳ್ಳಿ: ತಾಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ಶ್ರೀಜುಂಜೇಶ್ವರ ದೇವರ ಜಾತ್ರಾ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ವಿಷ ಜಂತುಗಳ ಹಾವಳಿಯಿಂದ ಕಾಪಾಡುವ ಆರಾಧ್ಯದೈವ ಆಗಿರುವ ಜುಂಜಪ್ಪ ಎಂದು ಕರೆಯುವ ದೇವರ ಸನ್ನಿಧಾನ ಸಣ್ಣ ಕುಕ್ಕೆಸುಬ್ರಮಣ್ಯ ಎಂದು ಪ್ರಸಿದ್ಧಿ ಪಡೆದಿದೆ. ಈ ಭಾಗದಲ್ಲಿ ಜುಂಜೇಶ್ವರ ಸ್ವಾಮಿಯು ನಾಗಪ್ಪನ ಅವತಾರದಲ್ಲಿ ಬರುವ ಜನರಿಗೆ ಯಾವುದೇ ನಾಗದೋಷ ಇಲ್ಲದಂತೆ ಕಾಪಾಡುವ ಶಕ್ತಿ ದೇವನಾಗಿದ್ದಾನೆ.
ಕನಸಿನಲ್ಲಿ ಹಾವು ಕಾಣಿಸಿಕೊಂಡಲ್ಲಿ ಹಾಗೂ ಹೊಲ ಗದ್ದೆಯಲ್ಲಿ ಕೆಲಸವನ್ನು ಮಾಡುವಾಗ ಚೇಳು, ಜರಿ ಸೇರಿದಂತೆ ವಿಷ ಜಂತುಗಳು ಕಡಿಯದಂತೆ ಹಾಗೂ ಮಾಟಮಂತ್ರಗಳಿಂದ ಯಾವುದೇ ತೊಂದರೆಗಳು ಬಾರದಿರಲಿ ಎಂದು ಭಕ್ತರು ಬೇಡಿಕೊಳ್ಳುತ್ತಾರೆ. ಸಂತಾನ ಫಲ, ನಾಗದೋಷ ಮುಂತಾದವುಗಳಿಗೆ ಇಲ್ಲಿಗೆ ಬಂದು ಬನ್ನಿ ಮರದಿಂದ ಸುಟ್ಟಿರುವ ಅಗ್ನಿಕುಂಡದ ವಿಭೂತಿ ಹಚ್ಚಿಕೊಳ್ಳುವ ಜೊತೆ ಅಲ್ಲಿಯ ತೀರ್ಥವನ್ನು ಸೇವಿಸಿದರೆ ಒಳ್ಳೆಯದು ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಪ್ರತಿ ಶ್ರಾವಣ ಮಾಸದ ಕಡೆ ಸೋಮವಾರ ಜಾತ್ರೆ ನಡೆಯುತ್ತಿದ್ದು, ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ದೇವಾಲಯಕ್ಕೆ ಸುಮಾರು ೪೦೦ ವರ್ಷಗಳ ಇತಿಹಾಸವಿದೆ.
ಹಿಂದಿನಿಂದಲೂ ಜುಂಜೇಶ್ವರ ಶಕ್ತಿ ದೇವನಾಗಿದ್ದು, ನಂಬಿ ಬರುವ ಹಲವು ಜನರ ಕಷ್ಟಗಳನ್ನ ನಿವಾರಿಸುತ್ತಾನೆ. ವಿಷ ಜಂತುಗಳು ಕಡಿದಾಗ ತಾಮ್ರ, ಹಿತ್ತಾಳೆಯ ಹಾವು, ಜರಿಯನ್ನ ದೇವರಿಗೆ ನೀಡಿ ಯಾವುದೇ ತೊಂದರೆಗಳಿದ್ದರೂ ಕಳೆದು ಹೋಗುತ್ತವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ದಾಸಪ್ಪ, ಅರ್ಚಕ ಗುರುಪ್ರಸಾದ್ ತಿಳಿಸುತ್ತಾರೆ.

Be the first to comment on "ಜುಂಜೇಶ್ವರ ದೇವರ ಜಾತ್ರಾ ಮಹೋತ್ಸವ"

Leave a comment

Your email address will not be published.


*